ನಟ ದಳಪತಿ ವಿಜಯ್ (Vijay) ಅವರು ರಾಜಕಾರಣಿಯಾಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಭಾನುವಾರ (ಮೇ 10) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದರು. ಈ ಸಂಭ್ರಮದ ಕ್ಷಣದಲ್ಲಿ ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಅವರು ಮುಂದಿನ ಸಾಲಿನಲ್ಲಿ ಕುಳಿತು ಮಗನ ಸಾಧನೆಯನ್ನು ಕಂಡು ಹೆಮ್ಮೆಪಟ್ಟರು. ಆಪ್ತ ಗೆಳತಿ ತ್ರಿಶಾ ಕೃಷ್ಣನ್ ಕೂಡ ಈ ಕ್ಷಣಕ್ಕೆ ಸಾಕ್ಷಿ ಆದರು. ಆದರೆ, ಇಡೀ ಸಮಾರಂಭದಲ್ಲಿ ವಿಜಯ್ ಪತ್ನಿ ಸಂಗೀತಾ (Vijay wife Sangeetha) ಮತ್ತು ಮಕ್ಕಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ, ಪುತ್ರ ಜೇಸನ್ ಸಂಜಯ್ ಮತ್ತು ಪುತ್ರಿ ದಿವ್ಯಾ ಸಾಶಾ ಈ ಮಹತ್ವದ ಕಾರ್ಯಕ್ರಮಕ್ಕೆ ಬರದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ‘ಇಂತಹ ಐತಿಹಾಸಿಕ ಕ್ಷಣದಲ್ಲಿ ವಿಜಯ್ ಅವರ ಕುಟುಂಬ ಜೊತೆಗಿರಬೇಕಿತ್ತು. ಪತ್ನಿ ಬರದಿದ್ದರೂ ಪರವಾಗಿಲ್ಲ, ಮಕ್ಕಳನ್ನಾದರೂ ಆಹ್ವಾನಿಸಬೇಕಿತ್ತು’ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ವಿಜಯ್ ಅವರ ಜೀವನದಲ್ಲಿ ಮತ್ತೊಬ್ಬ ನಟಿಯ ಪ್ರವೇಶವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ, ವಿಜಯ್ ಅವರ ಆಪ್ತ ಸ್ನೇಹಿತೆ ಎನ್ನಲಾದ ನಟಿ ತ್ರಿಶಾ ಕೃಷ್ಣನ್ ಅವರು ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿರುವುದು ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಇದು ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣ ಆಗಿದೆ.
‘ಒಬ್ಬ ಅಭಿಮಾನಿಯಾಗಿ ನನಗೆ ಇದು ಪರ್ಸನಲ್ ಆಗಿ ನೋವುಂಟು ಮಾಡಿದೆ. ವಿಜಯ್ ಅವರ ವೈಯಕ್ತಿಕ ಜೀವನ ಏನೇ ಇರಲಿ, ಮಕ್ಕಳಾದರೂ ಅವರ ಯಶಸ್ಸಿನ ಭಾಗವಾಗಬೇಕಿತ್ತು’ ಎಂದು ಅಭಿಮಾನಿಯೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿಜಯ್ ಬೆಂಬಲಕ್ಕೆ ನಿಂತಿದ್ದು, ‘ಅವರು ಪ್ರಬುದ್ಧ ವ್ಯಕ್ತಿಗಳು. ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು. ನಮಗೆ ಬೇಕಿರುವುದು ಒಬ್ಬ ಒಳ್ಳೆಯ ಮುಖ್ಯಮಂತ್ರಿ ಅಷ್ಟೇ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ, ರಾಜಕೀಯವಾಗಿ ವಿಜಯ್ ಅವರಿಗೆ ಇದು ದೊಡ್ಡ ಗೆಲುವಾಗಿದ್ದರೂ, ಕುಟುಂಬದ ಈ ಅಂತರವು ಅವರ ಅಭಿಮಾನಿಗಳಲ್ಲಿ ಸಣ್ಣದೊಂದು ನೋವು ಉಳಿಸಿದೆ. ಶೀಘ್ರದಲ್ಲೇ ವಿಜಯ್ ಅವರ ವಿಚ್ಛೇದನದ ಅರ್ಜಿ ವಿಚಾರಣೆ ನಡೆಯಲಿದೆ.





