ಆಪ್ ತೊರೆದು ಬಿಜೆಪಿ ಸೇರಿದ್ದ ರಾಘವ್‌ ಚಡ್ಡಾಗೆ ರಾಜ್ಯಸಭಾ ಅರ್ಜಿಗಳ ಸಮಿತಿಯ ಅಧ್ಯಕ್ಷ ಸ್ಥಾನ

Share with

ನವದೆಹಲಿ: ಇತ್ತೀಚೆಗಷ್ಟೇ ಆಮ್ ಆದ್ಮ ಪಾರ್ಟಿ (AAP) ತೊರೆದು ಭಾರತೀಯ ಜನತಾ ಪಾರ್ಟಿ (BJP) ಸೇರಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಪುನರ್ ರಚನೆಯಾಗಿರುವ ರಾಜ್ಯಸಭೆಯ ‘ಅರ್ಜಿಗಳ ಸಮಿತಿ’ಯ ಅಧ್ಯಕ್ಷರನ್ನಾಗಿ ಚಡ್ಡಾ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮೇ 20 ರಿಂದ ಜಾರಿಗೆ ಬರುವಂತೆ ಈ ಸಮಿತಿಗೆ ಒಟ್ಟು 10 ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು, ರಾಘವ್ ಚಡ್ಡಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಉಳಿದಂತೆ ಹರ್ಷ ಮಹಾಜನ್, ಗುಲಾಮ್ ಅಲಿ, ಶಂಭು ಶರಣ್ ಪಟೇಲ್, ಮಯಾಂಕ್‌ಕುಮಾರ್ ನಾಯಕ್, ಮಸ್ತಾನ್ ರಾವ್ ಯಾದವ್ ಬೀಡಾ, ಜೇಬಿ ಮಾಥರ್‌ ಹಶಾಂ, ಸುಭಾಸಿಶ್ ಖುಂಟಿಯಾ, ರ್ವಂಗ್ವಾ ನರ್ಜಾರಿ ಮತ್ತು ಸಂತೋಷ್ ಕುಮಾರ್ ಪಿ. ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಕಾರ್ಪೊರೇಟ್ ಕಾಯ್ದೆ ತಿದ್ದುಪಡಿ ಜಂಟಿ ಸಮಿತಿ ನೇಮಕ:

ADVERTISEMENT

ಇದೇ ವೇಳೆ ಮತ್ತೊಂದು ಪ್ರತ್ಯೇಕ ಅಧಿಸೂಚನೆಯಲ್ಲಿ, ‘ಕಾರ್ಪೊರೇಟ್ ಕಾಯ್ದೆಗಳ (ತಿದ್ದುಪಡಿ) ವಿಧೇಯಕ-2026’ರ ಜಂಟಿ ಸಮಿತಿಗೆ ಮೇನಕಾ ಗುರುಸ್ವಾಮಿ ಅವರನ್ನು ರಾಜ್ಯಸಭಾ ಸಭಾಪತಿ ರಾಧಾಕೃಷ್ಣನ್ ಅವರು ಮೇ 20 ರಂದು ನಾಮನಿರ್ದೇಶನ ಮಾಡಿದ್ದಾರೆ. ಮತ್ತೊಂದೆಡೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇದೇ ಜಂಟಿ ಸಮಿತಿಗೆ ಅರವಿಂದ್ ಸಾವಂತ್ ಅವರನ್ನು ಮೇ 21 ರಿಂದ ಜಾರಿಗೆ ಬರುವಂತೆ ನಾಮನಿರ್ದೇಶನಗೊಳಿಸಿದ್ದಾರೆ ಎಂದು ಲೋಕಸಭೆಯ ಪ್ರಕಟಣೆ ತಿಳಿಸಿದೆ.

ಹಿರಿಯ ನಾಯಕರೊಂದಿಗೆ ಉಂಟಾದ ಭಿನ್ನಾಭಿಪ್ರಾಯ ಹಾಗೂ ಆಮ್ ಆದ್ಮ ಪಾರ್ಟಿಯು ತನ್ನ ಮೂಲ ತತ್ವಗಳಿಂದ ದೂರ ಸರಿದಿದೆ ಎಂದು ಆರೋಪಿಸಿ ರಾಘವ್ ಚಡ್ಡಾ ಅವರು ಕಳೆದ ಏಪ್ರಿಲ್‌ನಲ್ಲಿ ಬಿಜೆಪಿ ಸೇರಿದ್ದರು. ಅವರ ಈ ನಿರ್ಧಾರ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

ಚಡ್ಡಾ ಅವರ ಬೆನ್ನಲ್ಲೇ ಆಪ್‌ನ ಇತರ ಆರು ಮಂದಿ ರಾಜ್ಯಸಭಾ ಸಂಸದರಾದ ಸ್ವಾತಿ ಮಾಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಕ್ಷಿ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಪಾಳಯ ಸೇರಿಕೊಂಡಿದ್ದರು.


Share with

Leave a Reply

Your email address will not be published. Required fields are marked *