ಸುಬ್ರಹ್ಮಣ್ಯದಲ್ಲಿ ಜನಸಾಗರ..50 ಸಾವಿರಕ್ಕೂ ಅಧಿಕ ಭಕ್ತಾದಿಗಳು..!

Share with

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ದ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದರು.

ಮಿಥುನ ಮಾಸ ಆರಂಭಗೊಂಡಿರುವುದು ಹಾಗೂ ಮಳೆ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಶನಿವಾರ ರಾತ್ರಿಯಿಂದಲೇ ಕ್ಷೇತ್ರಕ್ಕೆ ಬಂದಿದ್ದರು. ಹರಕೆ ಸೇವೆ, ದೇವರ ದರ್ಶನ ಹಾಗೂ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಪರಿಣಾಮ ದೇವಸ್ಥಾನ ಪರಿಸರ, ರಥಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡುಬಂತು.

ದೇವರ ದರ್ಶನಕ್ಕಾಗಿ ಭಕ್ತರು ರಥಬೀದಿವರೆಗೂ ಸರತಿ ಸಾಲಿನಲ್ಲಿ ನಿಂತಿದ್ದು, ಮಳೆಯ ಅಡಚಣೆ ಇಲ್ಲದ ಕಾರಣ ಸುಗಮವಾಗಿ ದರ್ಶನ ಪಡೆಯಲು ಸಾಧ್ಯವಾಯಿತು. ದೇವಸ್ಥಾನದ ವಸತಿಗೃಹಗಳು ವಾರದ ಹಿಂದೆಯೇ ಭರ್ತಿಯಾಗಿದ್ದರೆ, ಖಾಸಗಿ ವಸತಿಗೃಹಗಳೂ ಸಂಪೂರ್ಣ ತುಂಬಿಯಾಗಿದ್ದವು.

ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಬಳಿಯಿಂದ ಮುಖ್ಯ ಪೇಟೆಯವರೆಗೆ, ಕಾಶಿಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ರಸ್ತೆ ಎರಡೂ ಬದಿಗಳಲ್ಲಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ರಸ್ತೆಯಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಕೆಲವೆಡೆ “ನೋ ಪಾರ್ಕಿಂಗ್’ ಪ್ರದೇಶಗಳಲ್ಲಿಯೂ ವಾಹನಗಳನ್ನು ನಿಲುಗಡೆ ಮಾಡಿರುವುದು ಕಂಡುಬಂತು.


Share with

Leave a Reply

Your email address will not be published. Required fields are marked *