ಮಂಗಳೂರು: ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹೆಲ್ಮಟ್ ಕಡ್ಡಾಯ ಎಂಬ ನಿಯಮದ ಬಗ್ಗೆ ಪೊಲೀಸರು ಮತ್ತೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಶಾಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಮಕ್ಕಳನ್ನು ಶಾಲೆಗೆ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಪೊಲೀಸರು ಬೆಳ್ಳಂಬೆಳಗ್ಗೆ ಶಾಲೆಗಳ ಬಳಿ ತೆರಳಿ ಹೆತ್ತವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನೆನಪಿಸುತ್ತಿದ್ದಾರೆ.
ಸಾಮಾನ್ಯವಾಗಿ ಪೋಷಕರು ತಮ್ಮನ್ನು ಮಾತ್ರ ಸುರಕ್ಷಿತಗೊಳಿಸಿಕೊಳ್ಳಲು ಹೆಲ್ಮಟ್ ಧರಿಸುತ್ತಿದ್ದರೂ, ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ತೋರುವ ಘಟನೆಗಳು ಕಂಡುಬರುತ್ತಿವೆ. ದ್ವಿಚಕ್ರ ವಾಹನದಲ್ಲಿ ಮಗು ಮುಂದೆಯೋ ಅಥವಾ ಹಿಂಬದಿಯಲ್ಲೋ ಕುಳಿತಿದ್ದರೂ, ವಾಹನದ ಸಮತೋಲನ ತಪ್ಪಿದಾಗ ಅಥವಾ ಢಿಕ್ಕಿಯಾದಾಗ ಮಗುವಿನ ತಲೆಗೆ ಪೆಟ್ಟಾಗುವ ಅಪಾಯ ಹೆಚ್ಚು. ಸಣ್ಣ ಅಂತರದ ಪ್ರಯಾಣ, ಶಾಲೆ ಹತ್ತಿರವೇ ಇದೆ ಎಂಬ ಕಾರಣಕ್ಕೆ ಹೆಲೆಟ್ ನಿರ್ಲಕ್ಷಿಸುವುದು ಅಪಾಯಕಾರಿ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ಸಂಚಾರ ಶಿಸ್ತಿನ ಅಭ್ಯಾಸ ಮಾಡಿ
ಮಕ್ಕಳ ಜೀವ ರಕ್ಷಣೆ ಹೆಲ್ಮಟ್ ಧರಿಸುವುದು ದಂಡ ತಪ್ಪಿಸಿಕೊಳ್ಳಲು ಮಾತ್ರವಲ್ಲ, ಅಪಘಾತದ ವೇಳೆ ಜೀವ ಉಳಿಸುವ ಪ್ರಮುಖ ಸುರಕ್ಷತಾ ಕ್ರಮವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಚಾರ ಶಿಸ್ತಿನ ಅಭ್ಯಾಸ ಮಾಡಿಸಬೇಕು ಎಂಬುದು ಪೊಲೀಸರು ಮನವಿ ಮಾಡಿದ್ದಾರೆ.
4ರೊಳಗಿನ ಮಕ್ಕಳಿಗೂ ಬೇಕು ಸುರಕ್ಷೆ
4 ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುವಾಗಲೂ ಸುರಕ್ಷತಾ ಕ್ರಮ ಅನುಸರಿಸುವುದು ಕಡ್ಡಾಯವಾಗಿದೆ.
ಹೆಲ್ಮೆಟ್ ನೊಂದಿಗೆ ಚೈಲ್ಡ್ ಸೇಫ್ಟಿ ಬೆಲ್ಟ್ ಗಳನ್ನು ಸವಾರ ಅಥವಾ ಸಹ ಸವಾರ ಧರಿಸಿ ಮಗುವನ್ನು ಪೋಷಕರ ದೇಹಕ್ಕೆ ಬಿಗಿಯುವುದರಿಂದ ಬಿದ್ದುಹೋಗುವ ಸಾಧ್ಯತೆ ಕಡಿಮೆ. ನ್ಯಾಯಾಲಯವೂ ಇದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದು, ಇದು ಕೇವಲ ಕಾನೂನು ಪಾಲನೆಯ ವಿಷಯವಲ್ಲದೆ ಮಕ್ಕಳ ಜೀವ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಕ್ರಮವಾಗಿದೆ ಎಂದಿದೆ.
ಗ್ರಾಮೀಣ ಭಾಗದಲ್ಲೂ ಜಾಗೃತಿ ಅಗತ್ಯ
ಕೆಲವು ತಿಂಗಳ ಹಿಂದೆ ಪೊಲೀಸರು ಬೆಳಗ್ಗಿನ ಅವಧಿಯಲ್ಲಿ ನಗರದ ವಿವಿಧ ಶಾಲೆಗಳ ಬಳಿ ನಿಂತು ಮಕ್ಕಳ ಹೆತ್ತವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದರೂ, ಆದರೂ ಶೇ.80ರಷ್ಟು ಮಕ್ಕಳು ಅದರಲ್ಲೂ ಪ್ರಾಥಮಿಕ ಶಾಲಾ ಮಕ್ಕಳನ್ನು ಇನ್ನೂ ಹೆಲ್ಮಟ್ ಇಲ್ಲದೆಯೇ ಪೋಷಕರು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ. ನಗರ ಪ್ರದೇಶದಲ್ಲಿ ಹೆತ್ತವರಾದರೂ ಹೆಲ್ಮಟ್ ಧರಿಸಿರುತ್ತಾರೆ, ಆದರೆ ಗ್ರಾಮೀಣ ಭಾಗದಲ್ಲಿ ಹೆತ್ತವರ ತಲೆಯಲ್ಲೂ ಹೆಲ್ಮಟ್ ಇರುವುದಿಲ್ಲ. ಹಾಗಾಗಿ ಗ್ರಾಮೀಣ ಭಾಗದಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ.
ಹೆಲ್ಮೆಟ್ ಮುಖ್ಯಾಂಶಗಳು
- ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮಟ್ ಕಡ್ಡಾಯ
- ಮಗುವಿನ ಗಾತ್ರಕ್ಕೆ ಸರಿಹೊಂದುವ ಹೆಲ್ಮಟ್ ಬಳಕೆ ಅಗತ್ಯ
- ಹೆಲ್ಮಟ್ ಧರಿಸುವುದರಿಂದ ಅಪಘಾತದ ವೇಳೆ ತಲೆಗೆ ಪೆಟ್ಟು ಬೀಳುವುದರಿಂದ ರಕ್ಷಣೆ
- 500-1 ಸಾವಿರ ರೂ. ವರೆಗೆ ದಂಡ- ಚಾಲನ ಪರವಾನಿಗೆ ರದ್ದು ಮಾಡಲು ಅವಕಾಶ
- ಶಾಲೆ ಹತ್ತಿರದ ಪ್ರಯಾಣವೂ ಸುರಕ್ಷತಾ ನಿಯಮದಿಂದ ಹೊರತಲ್ಲ




