ಮುಳಿಯಾರು: ಮುಂಬರುವ ಚುನಾವಣೆಗಳಲ್ಲಿ ಕೇರಳದಲ್ಲೂ ಬಂಗಾಳದ ಇತಿಹಾಸ ಪುನರಾವರ್ತನೆಯಾಗಲಿದ್ದು, ಕೇರಳ ವಿಧಾನಸಭೆಯಲ್ಲೂ ಬಿಜೆಪಿಯ ಪ್ರಾತಿನಿಧ್ಯವು ಮೂರರಿಂದ ಮೂವತ್ತಕ್ಕೆ ಬೆಳೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ.ಎಲ್. ಅಶ್ವಿನಿ ಹೇಳಿದರು. ಬಿಜೆಪಿ ಮುಳಿಯಾರು ಕ್ಷೇತ್ರ ಸಮಿತಿ ಆಯೋಜಿಸಿದ್ದ ದ್ವಿದಿನ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ನಮ್ಮ ದೇಶದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಸೋಲಿನಿಂದ ಪಾಠ ಕಲಿತು ಅತ್ಯಂತ ಬಲಿಷ್ಠವಾಗಿ ಮರಳಿ ಬಂದ ಇತಿಹಾಸ ಬಿಜೆಪಿಗಿದೆ. ದೇಶ ಮತ್ತು ಸಂಘಟನೆಯ ಹಿತಾಸಕ್ತಿಯ ಮುಂದೆ ವ್ಯಕ್ತಿಗಳಿಗೆ ಹಾಗೂ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಮುಖ್ಯತೆಯಿಲ್ಲದ ರಾಜಕೀಯ ಪಕ್ಷ ಬಿಜೆಪಿ. ಪಿ.ಎಂ. ಶ್ರೀ ಯೋಜನೆ ಸೇರಿದಂತೆ ಕೇಂದ್ರದ ಯೋಜನೆಗಳನ್ನು ವಿರೋಧಿಸುವ ಯುಡಿಎಫ್ ಮತ್ತು ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಬಿಜೆಪಿಯ ಆಡಳಿತವನ್ನು ವಿರೋಧಿಸುವ ಎಲ್ಡಿಎಫ್ ಎರಡೂ ಒಂದೇ ದೋಣಿಯ ಪಯಣಿಗರು ಎಂದು ಎಂ.ಎ.ಲ್ ಅಶ್ವಿನಿ ಇದೇ ವೇಳೆ ತಿಳಿಸಿದರು.
ಬಿಜೆಪಿ ಮುಳಿಯಾರು ಕ್ಷೇತ್ರ ಅಧ್ಯಕ್ಷರಾದ ದಿಲೀಪ್ ಪಳ್ಳಂಚಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾಯಕ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಮುಳಿಯಾರು ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಜಯಕುಮಾರ್ ಮಾನಡ್ಕಂ ಹಾಗೂ ಶಶಿಕುಮಾರ್ ಅಮ್ಮಂಗೋಡ್ ಮಾತನಾಡಿದರು.
ಪೊಲಿಯಂತುರುತ್ ಎಕೋ ವಿಲೇಜ್ನಲ್ಲಿ ಎರಡು ದಿನಗಳ ಕಾಲ ನಡೆದ ಸಾಂಸ್ಥಿಕ ಕ್ಷೇತ್ರ ಅಧ್ಯಯನ ಶಿಬಿರದಲ್ಲಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸುಮಾರು ಅರವತ್ತಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.




