ಪುತ್ತೂರು: ತಾಲೂಕಿನಲ್ಲೇ ಅತೀ ಹೆಚ್ಚಿನ ವಿದ್ಯಾರ್ಥಿಗಳಿರುವ ಹಾರಾಡಿ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಇರುವ ವೇಳೆಯೇ ಮಳೆಯ ಜತೆಗೆ ಜೋರಾಗಿ ಗಾಳಿ ಬೀಸಿ ಹೆಂಚುಗಳು ಹಾರಿದ ಘಟನೆ ಜು. 7ರಂದು ಸಂಭವಿಸಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ಹಾನಿಯಾಗಿಲ್ಲ.

ಹೆಚ್ಚಿನ ವಿದ್ಯಾರ್ಥಿಗಳಿರುವ ಕಾರಣ
ಆರ್.ಸಿ.ಸಿ. ಕಟ್ಟಡದ ಮಹಡಿ ಮೇಲೆ ಹೆಂಚು ಹಾಕಿ ತರಗತಿ ಕೋಣೆ ನಿರ್ಮಿಸಿ 5ನೇ ತರಗತಿ ನಡೆಸಲಾಗುತ್ತಿದೆ. ಅದರ ಹೆಂಚುಗಳು ಗಾಳಿಗೆ ಏಕಾಏಕಿ ಹಾರಿದೆ. ತತ್ಕ್ಷಣ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಯಾವುದೇ ಹಾನಿಯಾಗಿಲ್ಲ. ಹೆಚ್ಚಿನ ಹೆಂಚುಗಳು ಗಾಳಿಗೆ ಹಾರಿದ ಕಾರಣ ಮಳೆ ನೀರು ಒಳಕ್ಕೆ ಬೀಳುತ್ತಿದೆ.
ಶಾಲೆಯು ಪುತ್ತೂರು ನಗರದಲ್ಲೇ ಇದ್ದು, ನಗರಸಭಾ ಎಂಜಿನಿಯರ್, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಮುಂಭಾಗದ ಆವರಣ ಗೋಡೆ ಕೂಡ ಮಳೆಯ ಕಾರಣದಿಂದ ಕುಸಿದು ಹೋಗಿದೆ.
ಮಳೆಯಿಂದ ಭಾಗಶಃ ಆವರಣ ಗೋಡೆ ಕುಸಿಯುತ್ತಿದ್ದು, ಬುಧವಾರ ಎದುರು ಭಾಗದಲ್ಲಿ ಸಂಪೂರ್ಣ ಕುಸಿದು ಬಿದ್ದಿದೆ.




