ಬಿಸಿರೋಡು ಸರ್ಕಲ್ ಬಳಿ ‘ಸತ್ತ ನಾಗರಹಾವು’ ಹೆಸರಿನಲ್ಲಿ ಹಣ ಸಂಗ್ರಹ ಆರೋಪ; ಸ್ಥಳೀಯರಲ್ಲಿ ಅನುಮಾನ

Share with

ಬಂಟ್ವಾಳ: ಕಲ್ಲಡ್ಕ-ವಿಟ್ಲ ಸಮೀಪದ ಕೆಲಿಂಜ ಪ್ರದೇಶದಲ್ಲಿ ನಾಗರಹಾವು ಮೃತಪಟ್ಟಿದೆ ಎಂದು ನಂಬಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ, ಇದೀಗ ಬಂಟ್ವಾಳ ತಾಲೂಕಿನ ಬಿಸಿರೋಡು ಸರ್ಕಲ್ ಸಮೀಪವೂ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಸೋಮವಾರ ಬಿಸಿರೋಡು ಸರ್ಕಲ್ ಸಮೀಪ ರಸ್ತೆ ಬದಿಯಲ್ಲಿ ನಾಗರಹಾವು ಮೃತಪಟ್ಟಿದೆ ಎಂದು ಹೇಳಿಕೊಂಡು ಐವರು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿಯ ಪ್ರಕಾರ, ಬಿಸಿರೋಡು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆಯಲ್ಲಿ ಮೂಡುಶೆಡ್ಡೆ ನಿವಾಸಿಗಳು ಎಂದು ಹೇಳಿಕೊಂಡಿದ್ದ ಐವರು, ಜೆಸಿಬಿ ಕಾಮಗಾರಿ ವೇಳೆ ನಾಗರಹಾವು ಸಾವನ್ನಪ್ಪಿದೆ ಎಂದು ತಿಳಿಸಿದ್ದರು. ಬಳಿಕ ಬಿಳಿ ಬಟ್ಟೆಯಲ್ಲಿ ಹಾವನ್ನು ಇರಿಸಿ, ಅದರ ಅಂತ್ಯಕ್ರಿಯೆಯನ್ನು ದೇವಸ್ಥಾನವೊಂದರಲ್ಲಿ ನೆರವೇರಿಸಲಾಗುವುದು ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಆದರೆ, ಜೆಸಿಬಿ ಕಾಮಗಾರಿಯಲ್ಲಿ ಹಾವು ಮೃತಪಟ್ಟಿರುವುದು ಅಥವಾ ಅಂತ್ಯಕ್ರಿಯೆ ನಡೆಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ.

ಈ ನಡುವೆ ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದ ಟ್ರಾಫಿಕ್ ಪೊಲೀಸರು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಹಾವನ್ನು ರಸ್ತೆ ಬದಿಯಿಂದ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಸಾರ್ವಜನಿಕರು ಯಾವುದೇ ಮಾಹಿತಿ ಅಥವಾ ಮನವಿಗಳನ್ನು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಸ್ಥಳೀಯರು ಸಲಹೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *