ಆ. 17ರಂದು ದೇಶಾದ್ಯಂತ BMS ಪ್ರತಿಭಟನೆ

Share with

ನವದೆಹಲಿ: ಕಾರ್ಮಿಕರ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಭಾರತೀಯ ಮಜ್ದೂರ್ ಸಂಘ (BMS) ಆಗಸ್ಟ್ 17ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ.

BMSನ ಕೇಂದ್ರ ಕಾರ್ಯಕಾರಿ ಸಮಿತಿಯ ನಿರ್ಧಾರದಂತೆ, ದೇಶದ 28 ರಾಜ್ಯ ಘಟಕಗಳು ಹಾಗೂ 42 ಕೈಗಾರಿಕಾ ಫೆಡರೇಶನ್‌ಗಳು ಜಿಲ್ಲಾ ಕೇಂದ್ರಗಳಲ್ಲಿ ಧರಣಿ, ಪ್ರತಿಭಟನೆ ಹಾಗೂ ರ‍್ಯಾಲಿಗಳನ್ನು ಆಯೋಜಿಸಲಿವೆ. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ, ಕೇಂದ್ರ ಹಣಕಾಸು ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ.

BMS ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಲ್ಲಿ EPS-95 ಕನಿಷ್ಠ ಪಿಂಚಣಿಯನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸುವುದು, ESI ವೇತನ ಮಿತಿಯನ್ನು ₹21,000ರಿಂದ ₹42,000ಕ್ಕೆ ಏರಿಸುವುದು, EPF ವೇತನ ಮಿತಿಯನ್ನು ₹15,000ರಿಂದ ₹30,000ಕ್ಕೆ ಹೆಚ್ಚಿಸುವುದು ಸೇರಿವೆ.

ಇದರೊಂದಿಗೆ ಬೋನಸ್ ಲೆಕ್ಕಾಚಾರದ ಮಿತಿ ಹೆಚ್ಚಳ, ಗ್ರಾಚ್ಯುಟಿ ಲೆಕ್ಕಾಚಾರದಲ್ಲಿ ಬದಲಾವಣೆ, ಜೀವನ ವೆಚ್ಚಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ, ಅಂಗನವಾಡಿ, ಆಶಾ ಹಾಗೂ ಇತರ ಯೋಜನಾ ಕಾರ್ಮಿಕರ ಗೌರವಧನ ಹೆಚ್ಚಳ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ BMS ಒತ್ತಾಯಿಸಿದೆ.

ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ, ಸರ್ಕಾರಿ ಸೇವೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಶೀಘ್ರ ನಡೆಸುವುದು ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವುದು ಕೂಡ BMSನ ಬೇಡಿಕೆಗಳಲ್ಲಿವೆ.

ಆಗಸ್ಟ್ 17ರ ಪ್ರತಿಭಟನೆಯ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು, ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಡ ಹೇರುವುದು BMSನ ಉದ್ದೇಶವಾಗಿದೆ.


Share with

Leave a Reply

Your email address will not be published. Required fields are marked *