
ಹಾಸನ: ವಾರ್ಡ್ಗಳ ಭೇಟಿ ಕಾರ್ಯಕ್ರಮದಲ್ಲಿ ಎದುರಾದ ಅಸಮಾಧಾನದ ಬಳಿಕ ಸಚಿವ ಶಿವಲಿಂಗೇಗೌಡರು ಹಾಸನ ಮಹಾನಗರ ಪಾಲಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಲಿ ಇರುವ ಹುದ್ದೆಗಳನ್ನು 24 ಗಂಟೆಯೊಳಗೆ ಭರ್ತಿ ಮಾಡುವುದಾಗಿ ತಿಳಿಸಿದರು. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದ್ದು, ಸಚಿವರ ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.
ಪತ್ರಕರ್ತರು ಹಾಸನಾಂಬ ಜಾತ್ರೆಯ ಲೆಕ್ಕಾಚಾರದಲ್ಲಿ ನಡೆದಿರುವ ಅವ್ಯವಸ್ಥೆಗಳ ಕುರಿತು ಪ್ರಶ್ನಿಸಿದಾಗ, ಜಾತ್ರೆ ಸುಸೂತ್ರವಾಗಿ ನಡೆಯಲು ಶ್ರಮಿಸುವುದಾಗಿ ಸಚಿವರು ಪ್ರತಿಕ್ರಿಯಿಸಿದರು. ಆದರೆ, ಜಾತ್ರೆಯ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಗುತ್ತಿಗೆ ಪ್ರಕ್ರಿಯೆಯ ಸ್ಪಷ್ಟತೆ ಮುಖ್ಯವಾಗಿರುವಾಗ, ಇಂತಹ ಉತ್ತರದಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಯಿತು. ಗುತ್ತಿಗೆದಾರ ನಾಗಣ್ಣ ಅವರೊಂದಿಗೆ ಮಾತನಾಡುವಾಗ ಸಚಿವರು, “ನಾಗಣ್ಣ, ಪ್ಲೀಸ್ ಕಮ್ಮಿ ಮಾಡ್ಕೋ” ಎಂದು ಹೇಳಿದ ವಿಚಾರವೂ ಚರ್ಚೆಗೆ ಗ್ರಾಸವಾಯಿತು. ಈ ಹೇಳಿಕೆಯು ಜಾತ್ರೆಯ ಗುತ್ತಿಗೆ ನಿರ್ವಹಣೆ ಮತ್ತು ಅದರ ಪಾರದರ್ಶಕತೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತು.
ಸುದ್ದಿಗೋಷ್ಠಿಯಲ್ಲಿ ಸಚಿವ ಶಿವಲಿಂಗೇಗೌಡರು ಉತ್ತರಿಸಬೇಕಾದ ಹಲವು ಪ್ರಶ್ನೆಗಳಿಗೆ ಸಂಸದ ಶ್ರೇಯಸ್ ಪಟೇಲ್ ಅವರೇ ಉತ್ತರಿಸಲು ಮುಂದಾಗುತ್ತಿದ್ದರು. ಇದರಿಂದ ಸಚಿವರಿಗಿಂತ ಸಂಸದರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಂತೆ ಕಂಡುಬಂತು. ಹಲವು ವಿಚಾರಗಳಲ್ಲಿ ಸಚಿವರಿಗೆ ಸಮರ್ಪಕ ಮಾಹಿತಿ ಇಲ್ಲದಿರುವುದು ಮತ್ತು ಸಂಸದರು ಮಧ್ಯಪ್ರವೇಶಿಸಿ ಉತ್ತರಿಸುತ್ತಿರುವುದು ಸಭೆಯಲ್ಲಿ ಗಮನ ಸೆಳೆಯಿತು. ಇದರಿಂದ ಜಿಲ್ಲಾ ಮಟ್ಟದ ಆಡಳಿತಾತ್ಮಕ ವಿಚಾರಗಳಲ್ಲಿ ಸಚಿವರ ಸಿದ್ಧತೆ ಹಾಗೂ ಮಾಹಿತಿಯ ಲಭ್ಯತೆ ಕುರಿತು ಪ್ರಶ್ನೆಗಳು ಮೂಡಿದವು.
ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಮಹಾನಗರ ಪಾಲಿಕೆಯ ಇಂಜಿನಿಯರ್ ಸತ್ಯನಾರಾಯಣ ಅವರ ವಿಚಾರವೂ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪವಾಯಿತು. ಅಮಾನತುಗೊಂಡಿದ್ದ ಅಧಿಕಾರಿ ಮತ್ತೆ ಹೇಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂಬ ಪ್ರಶ್ನೆಗೆ ಸಚಿವರು, “ನನಗೆ ಮಾಹಿತಿ ಇಲ್ಲ” ಎಂದು ಉತ್ತರಿಸಿದರು. ಜಿಲ್ಲೆಯ ಉಸ್ತುವಾರಿ ಸಚಿವರಿಗೇ ಇಂತಹ ಪ್ರಮುಖ ಆಡಳಿತಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಚರ್ಚೆಗೆ ಕಾರಣವಾಯಿತು.
ಇನ್ನು ಹಲವು ಪ್ರಮುಖ ವಿಚಾರಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿದ್ದರೂ, ಹಾಸನ ನಗರದ ವಾರ್ಡ್ಗಳಿಗೆ ಭೇಟಿ ನೀಡಿದ ಮೊದಲ ಉಸ್ತುವಾರಿ ಸಚಿವ ಎಂಬುದನ್ನು ಶಿವಲಿಂಗೇಗೌಡರು ಪದೇಪದೇ ಪ್ರಸ್ತಾಪಿಸಿದರು. ಆದರೆ, ಈ ಭೇಟಿಯಿಂದ ನಗರದ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರ ದೊರೆಯಲಿದೆ? ಸಾರ್ವಜನಿಕರಿಗೆ ಸಿಗುವ ಪ್ರಯೋಜನವೇನು? ಅಧಿಕಾರಿಗಳಿಂದ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆಯೇ? ಎಂಬ ಪ್ರಶ್ನೆಗಳು ಹಾಗೆಯೇ ಉಳಿದವು.
ಒಟ್ಟಿನಲ್ಲಿ, ವಾರ್ಡ್ಗಳ ಭೇಟಿ ಮತ್ತು ಸುದ್ದಿಗೋಷ್ಠಿಯ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಮೂಡಿದ್ದರೂ, ಹಲವು ಪ್ರಮುಖ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯದಿರುವುದು ಗಮನಾರ್ಹವಾಗಿದೆ. ಇನ್ನೂ ಹಾಸನಾಂಬ ಜಾತ್ರೆ ನಡೆಯಬೇಕಿರುವ ಹಿನ್ನೆಲೆಯಲ್ಲಿ, ಜಾತ್ರೆಯ ಲೆಕ್ಕಾಚಾರ, ಗುತ್ತಿಗೆ ನಿರ್ವಹಣೆ ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ಮುಂದಿನ ದಿನಗಳಲ್ಲಿ ಯಾವ ಬೆಳವಣಿಗೆಗಳು ನಡೆಯಲಿವೆ ಎಂಬ ಕುತೂಹಲದ ಜೊತೆಗೆ ಆತಂಕವೂ ಮನೆಮಾಡಿದೆ.




