ಅಕ್ರಮ ಖಾತೆ, ಪೋಡಿ ರದ್ದು: 10 ಎಕರೆ ಅರಣ್ಯ ಭೂಮಿ ವಾಪಸ್ ಪಡೆಯಲು ಉಪವಿಭಾಗಾಧಿಕಾರಿ ಆದೇಶ

Share with



ಸಕಲೇಶಪುರ: ಕೋಟ್ಯಂತರ ರೂಪಾಯಿ ಬೆಲೆಬಾಳುವ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಸ್ವಾಧೀನಕ್ಕೆ ನೀಡದಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಹಾಗೂ ಪೋಡಿ ಮಾಡಿಕೊಟ್ಟಿದ್ದ ಆದೇಶವನ್ನು ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಗ್ರಾಮದ ಸರ್ವೆ ನಂಬರ್ 72ರಲ್ಲಿ ಒಟ್ಟು 10 ಎಕರೆ ಅರಣ್ಯ ಭೂಮಿ ಇದೆ. ಈ ಪೈಕಿ ದಿನೇಶ್ ಬಿನ್ ನಾರಾಯಣ ಅವರಿಗೆ 4 ಎಕರೆ 38 ಗುಂಟೆ, ಮಂಜಮ್ಮ ಬಿನ್ ಪುಟ್ಟೇಗೌಡ ಅವರಿಗೆ 1 ಎಕರೆ 1 ಗುಂಟೆ ಹಾಗೂ ವೆಂಕಟೇಶ್ ಬಿನ್ ತಿಮ್ಮೇಗೌಡ ಅವರಿಗೆ 4 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿತ್ತು. ಈ ಅಕ್ರಮದ ವಿರುದ್ಧ ಸಕಲೇಶಪುರ ತಹಶೀಲ್ದಾರ್ ಹಾಗೂ ಸಹಾಯಕ ನಿರ್ದೇಶಕರು, ಭೂ ದಾಖಲೆಗಳ ಇಲಾಖೆ (ಎಡಿಎಲ್‌ಆರ್) ಅವರ ಕ್ರಮವನ್ನು ಪ್ರಶ್ನಿಸಿ ಅರಣ್ಯ ವಲಯಾಧಿಕಾರಿ ಹೇಮಂತ್ ಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಅಕ್ರಮ ಮಂಜೂರಾತಿಯನ್ನು ರದ್ದುಗೊಳಿಸಿದ್ದಾರೆ.

ಅತ್ಯಮೂಲ್ಯವಾದ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಉಪವಿಭಾಗಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಭೂ ದಾಖಲೆಗಳ ಜಂಟಿ ನಿರ್ದೇಶಕರು ಅಕ್ರಮ ಪೋಡಿ ಪ್ರಕ್ರಿಯೆಯನ್ನೂ ರದ್ದುಗೊಳಿಸಿದ್ದು, ಅರಣ್ಯ ಭೂಮಿಯನ್ನು ಹಿಂದಿನ ಸರ್ವೆ ಸಂಖ್ಯೆಯಲ್ಲೇ ಸರ್ಕಾರದ ಹೆಸರಿಗೆ ಉಳಿಸುವಂತೆ ಆದೇಶಿಸಿದ್ದಾರೆ. ಈ ಮೂಲಕ ಕಂದಾಯ ಇಲಾಖೆಯ ಅಕ್ರಮದ ವಿರುದ್ಧ ಹೋರಾಟ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಯ ದೊರೆತಿದೆ.

ಈ ಅಕ್ರಮದ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಹಲವೆಡೆ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ, ಮಂಜೂರಾತಿದಾರರ ಸ್ವಾಧೀನದಲ್ಲಿಲ್ಲ ಎಂಬ ಕಾರಣ ನೀಡಿ ಅನೇಕ ಭೂ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಉಳಿದಿವೆ. ಆದರೆ, ಕೆಲವು ಅಕ್ರಮ ಜಮೀನುಗಳು ಮಧ್ಯವರ್ತಿಗಳ ಮೂಲಕ ಸುಲಭವಾಗಿ ಖಾತೆ ಮಾಡಿಸಿಕೊಳ್ಳುತ್ತಿದ್ದು, ಬಳಿಕ ಪೋಡಿ ಮಾಡಿಸಿ ಬೇರೆಯವರಿಗೆ ಮಾರಾಟವಾಗುತ್ತಿರುವ ಆರೋಪಗಳೂ ಕೇಳಿಬಂದಿವೆ. ಹೆಚ್‌ಆರ್‌ಪಿ ಜಮೀನುಗಳೂ ಕೆಲವೇ ತಿಂಗಳಲ್ಲಿ ಖಾತೆ ಹಾಗೂ ಪೋಡಿಯಾಗಿ ಮಾರಾಟವಾಗಿರುವ ಉದಾಹರಣೆಗಳಿವೆ.

ಅರಣ್ಯ ವಲಯಾಧಿಕಾರಿ ಹೇಮಂತ್ ಕುಮಾರ್ ಅವರು ಅರಣ್ಯ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ಕಿರುಹುಣಸೆ ಗ್ರಾಮದ 10 ಎಕರೆ ಅಮೂಲ್ಯ ಅರಣ್ಯ ಭೂಮಿ ಸರ್ಕಾರದ ಹೆಸರಿನಲ್ಲಿ ಉಳಿಯುವಂತಾಗಿದೆ.

ನಕಲಿ ದಾಖಲೆಗಳ ಮೂಲಕ ಅರಣ್ಯ ಭೂಮಿ ಕಬಳಿಸುವ ಯತ್ನ?

ಸಕಲೇಶಪುರ ತಾಲ್ಲೂಕಿನ ಅಗ್ನಿ ಗ್ರಾಮದಲ್ಲಿ 1,292 ಎಕರೆ, ಮೂರ್ಕಣ್ ಗುಡ್ಡ ವ್ಯಾಪ್ತಿಯ ಅಚ್ಚನಹಳ್ಳಿ, ಜಮ್ಮನಹಳ್ಳಿ ಹಾಗೂ ಮದನಾಪುರ ಗ್ರಾಮಗಳಲ್ಲಿ 1,646 ಎಕರೆ, ಹೆಗ್ಗದ್ದೆಯಲ್ಲಿ 6,280 ಎಕರೆ ಹಾಗೂ ಕುಮಾರಳ್ಳಿ ವ್ಯಾಪ್ತಿಯಲ್ಲಿ 3,899 ಎಕರೆ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪಗಳೂ ಕೇಳಿಬಂದಿವೆ. ಭೂ ದಾಖಲೆಗಳ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಹಣಿ ನಮೂದು ಪ್ರಕ್ರಿಯೆಯಲ್ಲಿ ಅನುಮಾನಗೊಂಡ ಅರಣ್ಯ ವಲಯಾಧಿಕಾರಿ ಹೇಮಂತ್ ಕುಮಾರ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ರಾಜ್ಯದ ವಿವಿಧೆಡೆ ನಕಲಿ ಭೂ ದಾಖಲೆಗಳನ್ನು ಸೃಷ್ಟಿಸಿದ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ ಎನ್ನಲಾದ ನೇಮಣ್ಣ ಗೌಡ, ಸಕಲೇಶಪುರ ವ್ಯಾಪ್ತಿಯ ಸುಮಾರು 13 ಸಾವಿರ ಎಕರೆ ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಕಲಿ ಮುದ್ರೆಗಳನ್ನು ಬಳಸಿ ಭೂಮಿ ಕಬಳಿಸಲು ಪ್ರಯತ್ನಿಸಿದ ಆರೋಪದ ಮೇಲೆ ನೇಮಣ್ಣ ಗೌಡನನ್ನು ಮೂಡಿಗೆರೆಯಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.

ಅರಣ್ಯ ಭೂಮಿಯ ರಕ್ಷಣೆ ಹಾಗೂ ಭೂ ದಾಖಲೆಗಳಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


Share with

Tags:

Leave a Reply

Your email address will not be published. Required fields are marked *