
ಮಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹದ ನೆಪದಲ್ಲಿ ಮಹಿಳೆಯೊಬ್ಬರಿಗೆ ಸುಮಾರು ₹8.50 ಲಕ್ಷ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ 2021ರಲ್ಲಿ ಸ್ಟಾರ್ ಮೇಕರ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಅದರ ಸದಸ್ಯತ್ವ ಪಡೆದಿದ್ದರು. ಸುಮಾರು ಎರಡು ತಿಂಗಳ ಹಿಂದೆ ಇದೇ ಆ್ಯಪ್‌ನಲ್ಲಿ ‘ಕ್ರಿಸ್ ಪಾವ್’ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯ ಪರಿಚಯವಾಗಿತ್ತು. ತಾನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸವಾಗಿರುವುದಾಗಿ ಹೇಳಿಕೊಂಡಿದ್ದ ಆತ, ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದು, +447516106856 ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸುತ್ತಿದ್ದ.
ಈ ನಡುವೆ ನವೆಂಬರ್ 11ರಂದು ಮಹಿಳೆ ತನ್ನ ಮಗುವಿನ ಹುಟ್ಟುಹಬ್ಬದ ಬಗ್ಗೆ ತಿಳಿಸಿದಾಗ, ಡಾಲರ್ ಕರೆನ್ಸಿ, ಚಿನ್ನಾಭರಣ ಸೇರಿದಂತೆ ವಿವಿಧ ಉಡುಗೊರೆಗಳನ್ನು ಕಳುಹಿಸುವುದಾಗಿ ಆರೋಪಿ ಭರವಸೆ ನೀಡಿದ್ದ. ಅಲ್ಲದೆ, ಉಡುಗೊರೆಗಳ ಫೋಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ, ಡೆಲ್ಟಾ ಎಕ್ಸ್‌ಪ್ರೆಸ್ ಡೆಲಿವರಿ ಸರ್ವಿಸ್ ಮೂಲಕ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿ ಅದರ ಸ್ಲಿಪ್ ಅನ್ನೂ ಹಂಚಿಕೊಂಡಿದ್ದ.
ಇದಾದ ಬಳಿಕ ನವೆಂಬರ್ 9ರಂದು ಮಹಿಳೆಗೆ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಮುಂಬೈನ ಡೆಲ್ಟಾ ಎಕ್ಸ್‌ಪ್ರೆಸ್ ಡೆಲಿವರಿ ಸರ್ವಿಸ್‌ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡು, ಯುನೈಟೆಡ್ ಕಿಂಗ್‌ಡಮ್‌ನಿಂದ ಮಹಿಳೆಯ ಹೆಸರಿನಲ್ಲಿ ಪಾರ್ಸೆಲ್ ಬಂದಿರುವುದಾಗಿ ತಿಳಿಸಿದ್ದ. ಪಾರ್ಸೆಲ್ ಬಿಡುಗಡೆ ಮಾಡಲು ಸರ್ವಿಸ್ ಶುಲ್ಕ, ಆದಾಯ ತೆರಿಗೆ ಹಾಗೂ ಭಾರತ ಸರ್ಕಾರದ ಆ್ಯಂಟಿ ಟೆರರಿಸ್ಟ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಹೆಸರಿನಲ್ಲಿ ಹಣ ಪಾವತಿಸುವಂತೆ ಸೂಚಿಸಿದ್ದ.
ಇದನ್ನು ನಂಬಿದ ಮಹಿಳೆ, ಅಪರಿಚಿತರು ನೀಡಿದ ಬ್ಯಾಂಕ್ ಖಾತೆಗಳಿಗೆ ನವೆಂಬರ್ 13ರಿಂದ 20ರವರೆಗೆ ಹಂತ ಹಂತವಾಗಿ ಒಟ್ಟು ಸುಮಾರು ₹8.50 ಲಕ್ಷ ಹಣ ವರ್ಗಾಯಿಸಿದ್ದರು. ಬಳಿಕ ಯಾವುದೇ ಪಾರ್ಸೆಲ್ ತಲುಪದೆ, ಆರೋಪಿಗಳಿಂದ ಸೂಕ್ತ ಪ್ರತಿಕ್ರಿಯೆಯೂ ಬಾರದ ಹಿನ್ನೆಲೆಯಲ್ಲಿ ತಾನು ವಂಚನೆಗೊಳಗಾಗಿರುವುದನ್ನು ಅರಿತ ಮಹಿಳೆ ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




