ಕ್ಯಾನನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ: ಕಾಫಿ, ಬಾಳೆ ಬೆಳೆಗಳಿಗೆ ಅಪಾರ ಹಾನಿ!

Share with



ಸಕಲೇಶಪುರ: ತಾಲ್ಲೂಕಿನ ಕ್ಯಾನನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಗ್ರಾಮದ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಕಾಫಿ ಹಾಗೂ ಬಾಳೆ ಬೆಳೆಗಳನ್ನು ನಾಶಪಡಿಸಿವೆ. ಏಕಾಏಕಿ ತೋಟಗಳಿಗೆ ಪ್ರವೇಶಿಸಿದ ಕಾಡಾನೆಗಳು ಬೆಳೆಗಳನ್ನು ತುಳಿದು ಹಾನಿಗೊಳಿಸಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆಗಳನ್ನು ಬೆಳೆಸುವ ರೈತರಿಗೆ ಕಾಡಾನೆಗಳ ಉಪಟಳ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಘಟನೆಯ ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ತೋಟಗಳನ್ನು ಪರಿಶೀಲಿಸಿದ್ದಾರೆ. ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕಾಡಾನೆಗಳ ಚಲನವಲನದ ಬಗ್ಗೆ ಗ್ರಾಮಸ್ಥರು ಹಾಗೂ ರೈತರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕಾಡಾನೆಗಳ ನಿರಂತರ ದಾಳಿಯಿಂದ ಕೃಷಿ ಬದುಕು ಅತಂತ್ರವಾಗುತ್ತಿದ್ದು, ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ನೀಡುವುದರ ಜೊತೆಗೆ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ರೈತರ ಒತ್ತಾಯವಾಗಿದೆ.


Share with

Leave a Reply

Your email address will not be published. Required fields are marked *