ವಿದ್ಯಾರ್ಥಿಗಳ ಎದುರೇ ಶಾಲಾ ಬಸ್ ಚಾಲಕನ ಮೇಲೆ ಹಲ್ಲೆ: ಕತ್ತಿಯಿಂದ ಕೊಲೆ ಬೆದರಿಕೆ ಆರೋಪ

Share with



ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಸಮೀಪ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಸಾನ್ವಿ ಶಾಲೆಯ ಬಸ್ ಚಾಲಕನ ಮೇಲೆ ಸ್ಥಳೀಯ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 24ರಂದು ಸಂಜೆ ಶಾಲಾ ಮಕ್ಕಳನ್ನು ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸುವ ಕರ್ತವ್ಯದಲ್ಲಿದ್ದ ಚಾಲಕ ಸಂತೋಷ್ ಅವರ ಮೇಲೆ, ಬಸ್‌ನಲ್ಲಿ ವಿದ್ಯಾರ್ಥಿಗಳು ಇದ್ದಾಗಲೇ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಶಾಲೆಯಿಂದ ಮಕ್ಕಳನ್ನು ಮನೆಗಳಿಗೆ ಬಿಡಲು ತೆರಳುತ್ತಿದ್ದ ಬಸ್ ಹಿರಿದನಹಳ್ಳಿ ಗ್ರಾಮದ ಕಿರಿದಾದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಆಲ್ಟೊ ಕಾರಿನಲ್ಲಿದ್ದವರು ಬಸ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ರಸ್ತೆ ಕಿರಿದಾಗಿದ್ದ ಕಾರಣ ಕಾರಿಗೆ ದಾರಿ ಸಿಗದೆ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರವಾಗಿ ಕಾರಿನಲ್ಲಿದ್ದ ಶ್ರೀಕಾಂತ್ ಹಾಗೂ ಸುಬ್ರಮಣ್ಯ ಎಂಬವರು ಆಕ್ರೋಶಗೊಂಡು ಶಾಲಾ ಬಸ್‌ಗೆ ಅಡ್ಡಲಾಗಿ ವಾಹನ ನಿಲ್ಲಿಸಿ ಚಾಲಕ ಸಂತೋಷ್ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಲಕನ ಕೊರಳಪಟ್ಟಿ ಹಿಡಿದು ಬಸ್‌ನಿಂದ ಕೆಳಕ್ಕೆ ಎಳೆದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಶ್ರೀಕಾಂತ್ ಕಾರಿನಿಂದ ಕತ್ತಿಯನ್ನು ಹೊರತೆಗೆದು ವಿದ್ಯಾರ್ಥಿಗಳ ಎದುರಲ್ಲೇ ಸಂತೋಷ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಹಲ್ಲೆಯ ಸಂದರ್ಭದಲ್ಲಿ ಅವರ ಕೈಗೆ ಇರಿತದ ಗಾಯವಾಗಿದ್ದು, ಕಿವಿಗೂ ಹೊಡೆದು ಗಾಯಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಸ್‌ನಲ್ಲಿದ್ದ ಪುಟ್ಟ ಮಕ್ಕಳ ಕಿರುಚಾಟ ಮತ್ತು ಅಳುವ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದ ಶಾಲಾ ಬಸ್ ಚಾಲಕನ ಮೇಲೆ ವಿದ್ಯಾರ್ಥಿಗಳ ಕಣ್ಣೆದುರೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲಾ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕಾದ ಸಂದರ್ಭದಲ್ಲಿ, ಅವರ ಎದುರಲ್ಲೇ ಇಂತಹ ಹಿಂಸಾತ್ಮಕ ವರ್ತನೆ ಪ್ರದರ್ಶಿಸಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೋಷಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *