ಚೆನ್ನೈ ಮೂಲದ ಜೈನ್ ದಂಪತಿಯಿಂದ 121 ಕೆ.ಜಿ. ಚಿನ್ನದ ಆಭರಣ ಸಮರ್ಪಣೆ
ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಚೆನ್ನೈ ಮೂಲದ ಜೈನ್ ದಂಪತಿ ಬರೋಬ್ಬರಿ ₹206 ಕೋಟಿ ಮೌಲ್ಯದ 121 ಕೆ.ಜಿ. ಚಿನ್ನ ಹಾಗೂ ವಜ್ರಾಭರಣಗಳನ್ನು ದೇಣಿಗೆಯಾಗಿ ಸಮರ್ಪಿಸಿದ್ದಾರೆ.
ಚೆನ್ನೈ ಮೂಲದ ವರ್ಧಮಾನ್ ಜೈನ್ ಹಾಗೂ ಅವರ ಪತ್ನಿ ರಾಧಿಕಾ ಜೈನ್ ಅವರು ಗುರುವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಹಾಗೂ ಅರ್ಚಕರಿಗೆ ಆಭರಣಗಳನ್ನು ಹಸ್ತಾಂತರಿಸಿದರು.
ಈ ದೇಣಿಗೆಯಲ್ಲಿ ವಜ್ರಗಳಿಂದ ಅಲಂಕರಿಸಲಾದ ಕಿರೀಟ, ಸರಗಳು ಸೇರಿದಂತೆ ಒಟ್ಟು 46 ಆಭರಣಗಳು ಒಂಬತ್ತು ಸೆಟ್ಗಳಲ್ಲಿವೆ. ಸುಮಾರು 238.2 ಕ್ಯಾರೆಟ್ ತೂಕದ ವಜ್ರಗಳೂ ಇದರಲ್ಲಿ ಸೇರಿವೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ 106 ಕೆ.ಜಿ. ಚಿನ್ನದ ಆಭರಣಗಳನ್ನು ಹಾಗೂ ಶ್ರೀ ಪದ್ಮಾವತಿ ಅಮ್ಮನವರಿಗೆ 15 ಕೆ.ಜಿ. ತೂಕದ ಚಿನ್ನದ ಉಡುಪನ್ನು ಸಮರ್ಪಿಸಲಾಗಿದೆ.
ಟಿಟಿಡಿ ಮೂಲಗಳ ಪ್ರಕಾರ, ತಿರುಮಲ ದೇವಸ್ಥಾನದ ಇತಿಹಾಸದಲ್ಲೇ ಒಬ್ಬ ಭಕ್ತರಿಂದ ಬಂದಿರುವ ಅತಿದೊಡ್ಡ ದೇಣಿಗೆ ಇದಾಗಿದೆ. ಈ ಸಂದರ್ಭದಲ್ಲಿ ದಂಪತಿಯ ಭಕ್ತಿಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ತಿರುಮಲದಲ್ಲಿ ಪ್ರತಿದಿನ ಸ್ವಾಮಿಗೆ ಸುಮಾರು 120 ಕೆ.ಜಿ. ಚಿನ್ನದ ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಅಪೂರ್ವ ದೇಣಿಗೆ ಧಾರ್ಮಿಕ ಭಕ್ತಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.




