
ಹಾಸನ: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿದ್ದ ಧರಣಿಯಲ್ಲಿ ಭಾಗವಹಿಸಿದ್ದ ತಾಯಿಗೆ ವಿಧಿಯ ಕ್ರೂರ ಆಟದಿಂದಾಗಿ ಬರಸಿಡಿಲು ಬಡಿದಂತಾಗಿದೆ. ಆಶಾ ಕಾರ್ಯಕರ್ತೆಯರಾದ ರೂಪ ಅವರು ಧರಣಿಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ, ಅವರ ಪುತ್ರ ಸುಜಯ್ (21) ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ದುಃಖದ ಸುದ್ದಿ ತಿಳಿದುಬಂದಿದೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ತಾಯಿ ರೂಪ ಅವರು ಧರಣಿಯನ್ನು ತೊರೆದು ಅಲೂರಿನತ್ತ ಮರಳಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿಯ ದುಃಖ ಹೇಳತೀರದಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಧರಣಿಯಲ್ಲಿ ತಮ್ಮ ಹಕ್ಕು ಮತ್ತು ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದ ತಾಯಿಗೆ ಇಂತಹ ದುಃಖದ ಘಟನೆ ಎದುರಾಗಿರುವುದು ಸಾರ್ವಜನಿಕರ ಮನಕಲಕಿದೆ. ಯುವಕ ಸುಜಯ್ ಅವರ ಅಕಾಲಿಕ ನಿಧನಕ್ಕೆ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.




