ಚೂರಿ ಇರಿತ ಪ್ರಕರಣ: ಆರೋಪಿ ಬಂಧನ

Share with

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣವು ದಾಖಲಾಗಿದೆ.

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ ಗುತ್ತಿಗೆದಾರ ಮೊಹಮ್ಮದ್ ಶಮೀರ್ ಎಂಬವರನ್ನು ಗುಂಪು ಒಂದು ಅಡ್ಡಗಟ್ಟಿ ಚೂರಿಯಿಂದ ಇರಿದ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣವು ದಾಖಲಾಗಿದೆ.

ಕಾಪು ಮೂಲದ ಮೊಹಮ್ಮದ್ ಶಮೀರ್ ಎಂಬವರನ್ನು ಬಸ್ತಿಪಡ್ಪು ಬಳಿ ಪರಿಚಯಸ್ಥ ಹಸೈನಾರ್ ಎಂಬಾತ ನಿಲ್ಲಿಸಿ ಸಮೀಪದಲ್ಲೇ ಗುತ್ತಿಗೆ ಒಂದು ಇದೆ ಎಂದು ನಂಬಿಸಿ ಸಮುದಾಯ ಆರೋಗ್ಯ ಕೇಂದ್ರದ ಕಡೆ ಕರೆದುಕೊಂಡು ಬಂದಿದ್ದು ಇದೇ ವೇಳೆ ಅಲ್ಲಿಗೆ ದ್ವಿ-ಚಕ್ರ ವಾಹನದಲ್ಲಿ ಬಂದ ಉಮರ್ ನವಾಫ್ ಎಂಬಾತ ಹೊಸ ಜಾಗ ತೋರಿಸುವುದಾಗಿ ಮೊಹಮ್ಮದ್ ಶಮೀರ್ ಅವರನ್ನು ನಂಬಿಸಿ ಬಸ್ತಿಪಡ್ಪು ಬಳಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಬಸ್ತಿಪಡ್ಪು ಬಳಿ ಮೊಹಮ್ಮದ್ ಶಮೀರ್ ಅವರನ್ನು ಕಾರಿನಿಂದ ಇಳಿಸಿದ ಇಬ್ಬರು ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಹಲ್ಲೆಯನ್ನು ಕೂಡ ಮಾಡಿ, ಕಾರಿನ ಕೀ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ಇದಕ್ಕೆ ಮೊಹಮ್ಮದ್ ಶಮೀರ್ ನಿರಾಕರಿಸಿದಾಗ ಇಬ್ಬರು ಆರೋಪಿಗಳು ಜೀವಬೆದರಿಕೆ ಹಾಕಿ ಕಾಲಿಗೆ ಚೂರಿಯಿಂದ ಇರಿದು ಕಾರನ್ನು ಅಪಹರಿಸಿ ಹೋಗಿದ್ದಾರೆ ಎಂದು ದೂರಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ಪೊಲೀಸರ ತಂಡ ಆರೋಪಿ ಹಸೈನಾರ್ ನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *