ಕಾಸರಗೋಡು: ಕೇರಳದ ಚೆರುವತ್ತೂರಿನ ರೈತಕ್ಕಾಡ್ ಮೂಲದ ಆದಿತ್ಯನ್ ಎಂಬವರು ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸಿದ್ದು ಈ ಹಿನ್ನಲೆ ಅವರಿಗೆ ಎಐ ಚಾಲಿತ ಕ್ಯಾಮೆರಾದಿಂದ ಟ್ರಾಫಿಕ್ ಉಲ್ಲಂಘನೆ ಮಾಡಿದಕ್ಕಾಗಿ ದಂಡ ವಿಧಿಸಿರುವ ನೋಟೀಸ್ ಕಳುಹಿಸಲಾಗಿತ್ತು. ಆದರೆ ಅಚ್ಚರಿಯೇನಂದರೆ ಕಾರಿನಲ್ಲಿ ಆದಿತ್ಯನ್ ಸೇರಿದಂತೆ ಓರ್ವ ಮಹಿಳೆ ಅಲ್ಲದೆ ಹಿಂಬದಿ ಸೀಟ್ ನಲ್ಲಿ ಅಪರಿಚಿತ ಮಹಿಳಯ ಚಿತ್ರ ಕಂಡುಬಂದಿದೆ.


ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಈ ಮೇಲಿನ ಚಿತ್ರ ಸೆರೆಯಾಗಿದೆ. ಟ್ರಾಫಿಕ್ ಪೊಲೀಸರು ನೀಡಿರುವ ನೋಟೀಸ್‌ನಲ್ಲಿರುವ ಚಿತ್ರವು ಕಾರಿನ ಹಿಂಬದಿಯ ಸೀಟಿನಲ್ಲಿ ಇನ್ನೊರ್ವ ಮಹಿಳೆಯ ಆಕೃತಿಯನ್ನು ತೋರಿಸುತ್ತದೆ. ಆದರೆ ಅಂತಹ ವ್ಯಕ್ತಿ ಕಾರಿನಲ್ಲಿರಲಿಲ್ಲ ಎಂದು ಆದಿತ್ಯನ್ ಮತ್ತು ಆತನ ಕುಟುಂಬದವರು ವಾದಿಸಿದ್ದಾರೆ. ಹಾಗದರೆ ಆ ಮಹಿಳೆ ಯಾರು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.
ಚಲನ್ ಮೇಲೆ ವಾಹನದಲ್ಲಿ ಇಲ್ಲದವರ ಫೋಟೋ ಮುದ್ರಿಸಿರುವುದು ಮೋಟಾರು ವಾಹನ ಇಲಾಖೆಗೂ ಗೊಂದಲ ಮೂಡಿಸಿದ್ದು ಇದು ತಾಂತ್ರಿಕ ದೋಷದಿಂದ ಆಗಿರುವ ಎಡವಟ್ಟೋ ಅಥವಾ ಇನ್ನಾವುದಾದರೂ ಶಕ್ತಿಯ ಕೈವಾಡವೋ ಎಂಬ ಪ್ರಶ್ನೆ ಎದುರಾಗಿದೆ.




