ಉಪ್ಪಳ: ಶ್ರೀ ರಾಮಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಕಯ್ಯಾರು, ಶ್ರೀ ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಆಧೀನ ಸಂಸ್ಥೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ನಿರ್ಮಿಸಿದ ನೂತನ ಶಾಲಾ ಕಟ್ಟಡ ಮತ್ತು ಪ್ರಧಾನ ಮಂತ್ರಿ ಪೋಷಕ ಆಹಾರ ಯೋಜನೆಯ ಕೇರಳ ಸರಕಾರ ಬಿಡುಗಡೆ ಮಾಡಿದ ಪಾಕಶಾಲೆ ಹಾಗೂ ದಾಸ್ತಾನು ಕೋಣೆಯ ಉದ್ಘಾಟನಾ ಸಮಾರಂಭ ಶಾಲಾ ಮೆನೇಜರ್ ಭಾಸ್ಕರನ್ ಬಿ ಇವರು ಅಧ್ಯಕ್ಷತೆಯಲ್ಲಿ ನಡೆಯಿತು.


ಪೈವಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ ಪಾಕಶಾಲೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಪ್ರಾಥಮಿಕ ಸಾರ್ವಜನಿಕ ಶಾಲೆಗಳ ಕಾರ್ಯ ವೈಕರಿ, ಸಾರ್ವಜನಿಕ ಶಿಕ್ಷಣಕ್ಕೆ ಸರಕಾರವು ನೀಡುವ ಮಹತ್ವವನ್ನು ಸಭೆಗೆ ತಿಳಿಯಪಡಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವು ಈ ಶಾಲೆಯಿಂದ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ತರಗತಿಗಳು ದೊರೆಯಲು ಇಲಾಖೆಯ ವತಿಯಿಂದ ಸಹಾಯ ನೀಡುವುದಾಗಿ ಮಂಜೇಶ್ವರ ಉಪಜಿಲ್ಲಾ ಪ್ರಭಾರಿ ವಿದ್ಯಾಧಿಕಾರಿ ಜಿತೇಂದ್ರ ಎಸ್ ಎಚ್ ಭರವಸೆಯಿತ್ತರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಪೈವಳಿಕೆ ಗ್ರಾಮ ಪಂಚಾಯತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರಾದ ಝೆಡ್ ಎ ಕಯ್ಯಾರು ತಮ್ಮ ಹಳೇ ನೆನಪುಗಳನ್ನು ಮೆಲುಕು ಹಾಕುತ್ತಾ ಶುಭಹಾರೈಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಫಾತಿಮತ್ ಝೌರ ಮತ್ತು ಸಾಮಾಜಿಕ ಕಾರ್ಯಕರ್ತ ವಿ ರವೀಂದ್ರನ್, ಟ್ರಸ್ಟ್ ಉಪಾಧ್ಯಕ್ಷ ಅಶೋಕ್ ಬಾಡೂರ್ ಶುಭಹಾರೈಸಿದರು.
ಪಿ ಟಿ ಎ ಅಧ್ಯಕ್ಷರಾದ ದೀಪಕ್ ಶರ್ಮ ಮತ್ತು ಎಂ ಪಿ ಟಿ ಎ ಅಧ್ಯಕ್ಷೆ ಕವಿತ ಸಭೆಯಲ್ಲಿ ಉಪಸ್ಥಿತರಿದ್ದರು. 2022-23ನೇ ಶೈಕ್ಷಣಿಕ ವರ್ಷದಲ್ಲಿ ಸ್ಕಾಲರ್ ಶಿಪ್ ಪರೀಕ್ಷೆ ವಿಜೇತೆ ಕುಮಾರಿ ಮೋಕ್ಷಿತಳನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಲತ ಸಿ ಪಿ ಸ್ವಾಗತಿಸಿ ಟ್ರಸ್ಟ್ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಧನ್ಯವಾದ ಸರ‍್ಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ ಶೆಟ್ಟಿ ಜೊಡುಕಲ್ಲು ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭ ಆರಂಭದಲ್ಲಿ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಸಮಾರಂಭದ ಬಳಿಕ ಶಾಲಾ ಹಳೆ ವಿದ್ಯಾರ್ಥಿಗಳಿಂದ ಮತ್ತು ಶಾಲಾ ಹಿತೈಷಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.




