ಮುಂಬೈ, ಅಕ್ಟೋಬರ್ 9: ಬೆಂಗಳೂರು ಮೂಲದ ನವಿ ಯುಪಿಐ ಸಂಸ್ಥೆ ಬಯೋಮೆಟ್ರಿಕ್ ಅಥೆಂಟಿಕೇಶನ್ (Biometric authentication) ಫೀಚರ್ ಅನ್ನು ಅನಾವರಣಗೊಳಿಸಿದೆ. ಹಾಗೆಯೇ, ಹೊಸ ಬಳಕೆದಾರರ ಸೇರ್ಪಡೆ ಕ್ರಮಗಳನ್ನೂ ಸರಳಗೊಳಿಸಿದೆ. ದೊಡ್ಡ ಮಟ್ಟದಲ್ಲಿ ಬಯೋಮೆಟ್ರಿಕ್ ಅನ್ನು ಪರಿಚಯಿಸಿದ ಮೊದಲ ಯುಪಿಐ ಆ್ಯಪ್ ಎನ್ನುವ ಹೆಗ್ಗಳಿಕೆ ನವಿಯದ್ದಾಗಿದೆ. ಈ ಹೊಸ ಫೀಚರ್ನಿಂದ ಯುಪಿಐ ವಹಿವಾಟು ಹೆಚ್ಚು ಸುಲಭ ಮತ್ತು ಸುರಕ್ಷಿತವೆನಿಸುತ್ತದೆ. ಬಳಕೆದಾರರು ಟ್ರಾನ್ಸಾಕ್ಷನ್ ಮಾಡುವಾಗ ಪಿನ್ ನಮೂದಿಸುವ ಅವಶ್ಯಕತೆ ಇರುವುದಿಲ್ಲ. ಫೋನ್ನಲ್ಲಿರುವ ಫಿಂಗರ್ ಪ್ರಿಂಟ್ ಅಥವಾ ಫೇಸ್ ರೆಕಗ್ನಿಶನ್ ಫೀಚರ್ ಬಳಸಿ ಟ್ರಾನ್ಸಾಕ್ಷನ್ ಅನ್ನು ದೃಢೀಕರಿಸುವ ಅವಕಾಶ ಸಿಗುತ್ತದೆ.
ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್ಟೆಕ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ನವಿ ಆ್ಯಪ್ ತನ್ನ ಹೊಸ ಫೀಚರ್ಗಳನ್ನು ಪ್ರಕಟಿಸಿದೆ. ನವಿ ಮಾತ್ರವಲ್ಲ, ಫೋನ್ ಪೇ, ಪೇಟಿಎಂ ಇತ್ಯಾದಿ ವಿವಿಧ ಯುಪಿಐ ಆ್ಯಪ್ಗಳೂ ಕೂಡ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ಅಳವಡಿಸುತ್ತಿವೆ.

ಬಯೋಮೆಟ್ರಿಕ್ ಅಥೆಂಟಿಕೇಶನ್, ಸುಲಭ, ಕ್ಷಿಪ್ರ ಮತ್ತು ಸುರಕ್ಷಿತ ಪೇಮೆಂಟ್
ನವಿ ಆ್ಯಪ್ ತನ್ನಲ್ಲಿರುವ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ಅನ್ನು ಸುರಕ್ಷಿತ ಹಾಗೂ ಸ್ವಂತ ಆಪರೇಟಿಂಗ್ ಸಿಸ್ಟಂ ಟೆಕ್ನಾಲಜಿಯಲ್ಲಿ ನಿರ್ಮಿಸಿದೆ. ಇದರಿಂದ ಯುಪಿಐ ಪೇಮೆಂಟ್ ಬಹಳ ವೇಗವಾಗಿ ಆಗುತ್ತದೆ. ಈ ದೃಢೀಕರಣವು ಫೋನ್ನ ಸುರಕ್ಷಿತ ಪರಿಸರದೊಳಗೆಯೇ ನಡೆಯುವುದರಿಂದ ಖಾಸಗಿ ದತ್ತಾಂಶವು ಹೊರಗೆ ಹೋಗುವುದೇ ಇಲ್ಲ. ಹೀಗಾಗಿ, ನಿಮ್ಮ ವಹಿವಾಟು ಬಹಳ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.
ನವಿ ಆ್ಯಪ್ನಲ್ಲಿ ಈ ಫೀಚರ್ ಬಳಕೆ ಐಚ್ಛಿಕವಾಗಿರುತ್ತದೆ. ಬಯೋಮೆಟ್ರಿಕ್ ಅಥೆಂಟಿಕೇಶನ್ ಫೀಚರ್ ಅನ್ನು ಯಾವಾಗ ಬೇಕಾದರೂ ಎನೇಬಲ್ ಅಥವಾ ಡಿಸೇಬಲ್ ಮಾಡಲು ಅವಕಾಶ ಇರುತ್ತದೆ. ಈ ಫೀಚರ್ ಜೊತೆಗೆ ಪಿನ್ ನಮೂದಿಸುವ ಫೀಚರ್ ಕೂಡ ಇರುತ್ತದೆ. ಬಳಕೆದಾರರು ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡಬಹುದು.
ನವಿ ಆ್ಯಪ್ ಸ್ಥಾಪಿಸುವ ಕ್ರಮ ಬಹಳ ಸರಳ
ನವಿ ಆ್ಯಪ್ ಹೊಸ ಬಳಕೆದಾರರಿಗೆ ಸುಗಮ ದಾರಿ ಮಾಡಿಕೊಟ್ಟಿದೆ. ಆ್ಯಪ್ ಡೌನ್ಲೋಡ್ ಮಾಡಿ ನೊಂದಣಿ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡುವ ಕಾರ್ಯವನ್ನು ಬಹಳ ಕ್ಷಿಪ್ರವಾಗಿ ಆಗುವಂತೆ ಕ್ರಮಗಳನ್ನು ಸರಳಗೊಳಿಸಲಾಗಿದೆ.
‘ಸುರಕ್ಷತೆ ಮತ್ತು ಸರಳತೆ ನಮ್ಮ ಉತ್ಪನ್ನ ತತ್ವದ ಪ್ರಮುಖ ಅಂಶಗಳಾಗಿವೆ. ಈ ಹೊಸ ಫೀಚರ್ಗಳಿಂದ ಡಿಜಿಟಲ್ ಪೇಮೆಂಟ್ಸ್ನಲ್ಲಿ ನಾವು ವಿಶ್ವಾಸಾರ್ಹತೆಗೆ ಹೊಸ ಮಾನದಂಡ ನೀಡುತ್ತಿದ್ದೇವೆ’ ಎಂದು ನವಿ ಲಿಮಿಟೆಡ್ ಕಂಪನಿಯ ಎಂಡಿ ಮತ್ತು ಸಿಇಒ ರಾಜೀವ್ ನರೇಶ್ ಹೇಳಿದ್ದಾರೆ.




