ಗಡಾಯಿಕಲ್ಲು ಚಾರಣಕ್ಕೆ ಅವಕಾಶ; ಗುರುತಿನ ಚೀಟಿ, ಪ್ರವೇಶ ಶುಲ್ಕ ಕಡ್ಡಾಯ

Share with

ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲು ಚಾರಣ ಗುರುವಾರದಿಂದ ಮುಕ್ತವಾಗಲಿದೆ. ಈ ಬಾರಿ ಜೂ. 1ರಿಂದ ಚಾರಣಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ತಾಂತ್ರಿಕ ಕಾರಣಗಳಿಂದ ನಿರ್ಬಂಧ ವಿಧಿಸಲಾಗಿತ್ತು. ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸಿ ಕುದುರೆಮುಖ ವನ್ಯಜೀವಿ ವಿಭಾಗದಿಂದ ಮತ್ತೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಗಡಾಯಿಕಲ್ಲು ಚಾರಣಕ್ಕೆ ತೆರಳುವ ಪ್ರತಿಯೊಬ್ಬರೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಧಿಕೃತ ವೆಬ್‌ಸೈಟ್ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಪ್ರತಿದಿನ ಗರಿಷ್ಠ 500 ಮಂದಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸುರಕ್ಷೆ ದೃಷ್ಟಿಯಿಂದ ಮಿತಿ ವಿಧಿಸಲಾಗಿದೆ. ಚಾರಣಿಗರಿಗೆ ಬೆಳಗ್ಗೆ 7ರಿಂದ ಅಪರಾಹ್ನ 1ರ ವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಗುರುತಿನ ಚೀಟಿ, ಶುಲ್ಕ ಕಡ್ಡಾಯ

ಪ್ರವೇಶದ ವೇಳೆ ಫೋಟೋ, ವಿಳಾಸ ಹಾಗೂ ಜನ್ಮ ದಿನಾಂಕ ಹೊಂದಿರುವ ಸರಕಾರದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿ ಸಬೇಕು. ಅಲ್ಲದೆ, ಪ್ರತಿ ವ್ಯಕ್ತಿಗೆ 50 ರೂ. ಪ್ರವೇಶ ಶುಲ್ಕವನ್ನು ಆಫ್‌ಲೈನ್ ಮೂಲಕ ಪಾವತಿಸಬೇಕಾಗಿದೆ. ಮಳೆಗಾಲದಲ್ಲಿ ಮೆಟ್ಟಿಲುಗಳು ಹಾಗೂ ಕಲ್ಲುಗಳು ಜಾರುವ ಸಾಧ್ಯತೆ ಇರುವುದರಿಂದ ಚಾರಣಿಗರು ಎಚ್ಚರಿಕೆ ವಹಿಸಬೇಕಾಗಿದ್ದು, ಪ್ಲಾಸ್ಟಿಕ್ ವಸ್ತು, ಮದ್ಯಪಾನ, ಧೂಮಪಾನ ನಿಷೇಧಿಸಲಾಗಿದೆ.

ಚಾರಣಿಗರಿಗೆ ತೊಂದರೆ ಆಗಬಾರದೆಂದು 500 ಮಂದಿಯ ಮಿತಿ ಮಾಡಿದ್ದೇವೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಶರ್ಮಿಷ್ಠಾ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *