ಕಣ್ಣೂರು (ಕೇರಳ): ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ ಮಹಿಳೆಯೊಬ್ಬರನ್ನು ಜನರ ಗುಂಪೊಂದು ಸಾರ್ವಜನಿಕವಾಗಿ ನಿಂದಿಸಿದ್ದು, ಇದರಿಂದ ನೊಂದ ಅವರು(ಮಹಿಳೆ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಸೀನಾ ಎಂದು ಗುರುತಿಸಲ್ಪಟ್ಟ ಮಹಿಳೆ ಮಂಗಳವಾರ ಪಿಣರಾಯಿ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಭಾನುವಾರ ಸಂಜೆ ರಸೀನಾ ಅವರು ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದರು. ಇದನ್ನು ನೋಡಿದ ಗುಂಪೊಂದು ಆಕೆಯನ್ನು ಪ್ರಶ್ನಿಸಿದೆ. ಅಲ್ಲದೇ ಸ್ನೇಹಿತನನ್ನು ಗುಂಪು ವಿಚಾರಣೆಗೆ ಒಳಪಡಿಸಿದೆ. ಇದರಿಂದ ತೀವ್ರವಾಗಿ ನೊಂದಿದ್ದಾಗಿ ಮಹಿಳೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ವಿ.ಸಿ ಮುಬೀರ್ (28), ಕೆ.ಎ ಫೈಸಲ್ (34) ಮತ್ತು ವಿ.ಕೆ ರಫ್ತಾಸ್ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅದೇ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.
ರಸೀನಾ ಮತ್ತು ಆಕೆಯ ಸ್ನೇಹಿತನನ್ನು ಮಸೀದಿಯ ಬಳಿ ಗುಂಪೊಂದು ಪ್ರಶ್ನಿಸಿತು. ಬಳಿಕ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಅನ್ನು ಕಸಿದುಕೊಂಡಿದೆ. ಅಲ್ಲದೇ ಮಹಿಳೆಯ ಕುಟುಂಬ ಸದಸ್ಯರನ್ನು ಎಸ್‌ಡಿಪಿಐ ಕಚೇರಿಗೆ ಕರೆಸಿ ಅವಮಾನಿಸಿದೆ ಎಂದು ಆರೋಪಿಸಲಾಗಿದೆ.
ತನಗೆ ಆದ ಅವಮಾನದಿಂದ ತೀವ್ರ ನೊಂದಿದ್ದಾಗಿ ಮಹಿಳೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.