ಪಂಡರಾಪುರ (ಮಹಾರಾಷ್ಟ್ರ): ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ಗೊತ್ತಿಲ್ಲದ, ಹಳ್ಳಿಗಾಡಿನ ಮುಗ್ಧ ಹಾಗೂ ವೃದ್ಧ ದಂಪತಿ ಪಟ್ಟಣಕ್ಕೆ ಬಂದು ಚಿನ್ನದ ಮಾಂಗಲ್ಯ ಕೊಳ್ಳಲು ಬಂದಿದ್ದಾರೆ. ಅವರ ಬಳಿ ವರ್ಷಗಳಿಂದ ಕೂಡಿಟ್ಟಿರುವ ಕೆಲವು ಸಾವಿರ ರೂ.ಗಳಷ್ಟೇ ಇದೆ. ಆದರೆ, ಆ ವೃದ್ಧ ದಂಪತಿ ಮುಗ್ಧತೆಯನ್ನು ಹಾಗೂ ಅವರ ಆಸೆಯ ಕಂಗಳಿಗೆ ನಿರಾಸೆ ಮಾಡಬಾರದೆಂದು ತಿಳಿಸಿದ ಆ ಅಂಗಡಿ ಮಾಲೀಕ ಆ ವೃದ್ಧ ದಂಪತಿಗೆ ಉಚಿತವಾಗಿ ಚಿನ್ನದ ಮಾಂಗಲ್ಯ ಕೊಟ್ಟಿದ್ದಾನೆ ಈ ಘಟನೆ ಇತ್ತೀಚೆಗೆ ನಡೆದಿದ್ದು ಜೂ. 18ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಷ್ಟೇ ಅಲ್ಲದೆ, ಅವರು ನೀಡಿದ್ದ ಅಲ್ಪ ಹಣವನ್ನು ಅವರಿಗೆ ಹಿಂದಿರುಗಿಸಿದ್ದಾನೆ. ಇದನ್ನು ಕಂಡು ಆ ವೃದ್ಧ ದಂಪತಿಯ ಕಣ್ಣಲ್ಲಿ ನೀರು ಉಕ್ಕಿ ಹರಿದಿದೆ. ಅವರನ್ನು ಸಮಾಧಾನಪಡಿಸಿ ಆತ ಅವರನ್ನು ಅವರ ಊರಿಗೆ ಕಳುಹಿಸಿದ್ದಾನೆ. ಮಾಲೀಕನ ಒಳ್ಳೆಯತನವನ್ನು ಕಂಡು ಆ ಹಿರಿಯ ಜೀವಗಳು ಆತನನ್ನು ಹರಸಿ ಊರ ಕಡೆಗೆ ಹೆಜ್ಜೆ ಹಾಕಿದ್ದಾರೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪಂಡರಾಪುರದಲ್ಲಿ. ಆ ವೃದ್ಧ ಮಹಿಳೆಗೆ ಬಹಳ ದಿನಗಳಿಂದ ಚಿನ್ನದ ಮಂಗಳಸೂತ್ರ ಖರೀದಿಸುವ ಆಸೆಯಿತ್ತು. ಅದನ್ನು ತನ್ನ ಪತಿಯ ಬಳಿ ಹೇಳಿದ್ದರು. ಬಡಕುಟುಂಬದ ಆಕೆಯ ಪತಿ ತನಗಿದ್ದ ಅಲ್ಪ ಆದಾಯದಲ್ಲೇ ಒಂದಿಷ್ಟು ಹಣ ಸಂಗ್ರಹವಾದ ಬಳಿಕ ಅಜ್ಜ ಅಜ್ಜಿ ಇದಕ್ಕೆ ಬಂಗಾರ ಬರಬಹುದು ಎಂದು ಊಹಿಸಿದ್ದರು.
ಅಷ್ಟರಲ್ಲೇ ಅವರಿಬ್ಬರೂ ಆಗಾಗ್ಗೆ ಪಂಡರಾಪುರಕ್ಕೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಪಂಡರಾಪುರಕ್ಕೆ ಹೋಗಿ ಅಲ್ಲಿ ಪಾಂಡುರಂಗನ ದರ್ಶನ ಪಡೆದು, ಅಲ್ಲೇ ಪೇಟೆಯಲ್ಲಿರುವ ಯಾವುದಾದರೂ ಬಂಗಾರದ ಅಂಗಡಿಗೆ ಹೋಗಿ ಕೂಡಿಟ್ಟಿರುವ ಹಣ ಕೊಟ್ಟು ಬಂಗಾರ ಖರೀದಿಸುವ ಇರಾದೆ ಹೊಂದಿದ್ದರು. ಆದರೆ, ಅಂಗಡಿಗೆ ಹೋದಾಗಲೇ ಬಂಗಾರದ ರೇಟು ನಮ್ಮಂಥ ಬಡವರಿಗಲ್ಲ ಎಂಬುದು ಅವರ ಅರಿವಿಗೆ ಬಂದಿದ್ದು.
ಚಿನ್ನದ ಬೆಲೆ 10 ಗ್ರಾಂ.ಗೆ ಲಕ್ಷ ರೂ. ದಾಟಿದೆ. ಪ್ರತಿದಿನ ಸುದ್ದಿಗಳ ಕಡೆಗೆ ಗಮನ ಇರುವವರಿಗೆ, ಸೋಷಿಯಲ್ ಮೀಡಿಯಾ ಜೊತೆಗೆ ನಂಟು ಹೊಂದಿರುವವರಿಗೆ ಇದು ಸಾಮಾನ್ಯವಾಗಿ ಗೊತ್ತಿರುತ್ತದೆ. ಪಾಪ! ಗ್ರಾಮೀಣ ಭಾಗದಲ್ಲಿರುವ, ಅನಕ್ಷರಸ್ಥ, ಬಡತನದಲ್ಲಿರುವ, ಇಂದಿನ ಸ್ಮಾರ್ಟ್ ಫೋನ್, ಸೋಷಿಯಲ್ ಮಿಡಿಯಾ ಇದ್ಯಾವ ಸೌಲಭ್ಯಗಳಿಲ್ಲದೆ ಬದುಕುವವರಿಗೆ ಇದು ಹೇಗೆ ಗೊತ್ತಿರಲಿಕ್ಕೆ ಸಾಧ್ಯ?