ಉಡುಪಿ: ಎರಡನೇ ಮದುವೆಯಾಗಿ ದುಬಾಯಿಗೆ ತೆರಳಿದ ಪತಿಗೆ ಮೊದಲನೇ ಪತ್ನಿ ಮೊಬೈಲ್ ಕರೆ ಮಾಡಿ ವಿಚಾರಿಸಿದಾಗ ಮೂರು ಬಾರಿ ತಲಾಖ್ ಹೇಳಿದ್ದು, ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಅಮ್ರನ್ 2013ರಲ್ಲಿ ಉಡುಪಿಯ ಆದಿಲ್ ಇಬ್ರಾಹಿಂ ಅವರನ್ನು ಮಂಗಳೂರಿನ ಬೋಳಾರದ ಶಾದಿ ಮಹಲ್‌ನಲ್ಲಿ ಇಸ್ಲಾಂ ಷರೀಯತ್ ಪ್ರಕಾರ ವಿವಾಹವಾಗಿದ್ದರು. ಆಗ ವರದಕ್ಷಿಣೆಯಾಗಿ 60 ಪವನ್ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು. ಉಡುಗೊರೆಯಾಗಿ 10 ಪವನ್ ಚಿನ್ನ, ಮದುವೆ ವೆಚ್ಚ 8 ಲ.ರೂ.ಗಳನ್ನು ವಧುವಿನ ತಂದೆ ನೀಡಿದ್ದರು. ದಂಪತಿ ಬ್ರಹ್ಮಾವರ ಆಕಾಶವಾಣಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ನಾಲ್ಕೇ ದಿನದಲ್ಲಿ ಪತಿ ಆದಿಲ್ ಇಬ್ರಾಹಿಂ, ಸಂಬಂಧಿಕರಾದ ಎಚ್. ಇಬ್ರಾಹಿಂ ಸಾಹಿಬ್, ಇರ್ಷಾದ್ ಬಾನು, ಅಲ್‌ಫಿಯಾ, ಜಾಫರ್ ಅವರು ಸಾಲ ತೀರಿಸಲು ಬಂಗಾರ ಕೊಡುವಂತೆ ಕೇಳಿದ್ದು ಅವರ ನಯವಾದ ಮಾತನ್ನು ನಂಬಿದ ಅಮ್ರನ್ 10 ಪವನ್ ಚಿನ್ನ ನೀಡಿದ್ದರು. ಮತ್ತೆ ಎರಡು ತಿಂಗಳಲ್ಲಿ 10 ಪವನ್ ನೆಕ್ಲೆಸ್ ಅಡವಿರಿಸಿ ಹಣ ಪಡೆದಿದ್ದರು. ಸಾಲ ನೀಡಿದವರನ್ನು ಮನೆಗೆ ಕಳುಹಿಸಿ ಮಾನಸಿಕ ಕಿರುಕುಳ ನೀಡತೊಡಗಿದರು. ಬಳಿಕ ಮೋಸದಿಂದ 40 ಗ್ರಾಂ ಚಿನ್ನ ಮತ್ತು 2.50 ಲ.ರೂ. ಪಡೆದಿದ್ದು ಹಿಂದಿರುಗಿಸಿಲ್ಲ. ಎಂಟು ತಿಂಗಳ ಬಳಿಕ ಪತಿ ಆದಿಲ್ ಚಿನ್ನಾಭರಣ ಮಾರಿ ಅಮ್ರನ್ ಅವರ ಅಕ್ಕನ 120 ಗ್ರಾಂ. ಚಿನ್ನವನ್ನು ಅಡವಿರಿಸಿ ಬ್ರಹ್ಮಾವರದ ಮೀನಾ ಅನ್‌ಮೋಲ್‌ನಲ್ಲಿ ಮನೆ ಖರೀದಿಸಿದ್ದರು.
ಅನಂತರ ಪತಿಯ ಬೇಡಿಕೆಯಂತೆ ಸ್ನೇಹಿತರು, ಸಂಬಂಧಿಕರಿಂದ 8 ಲ.ರೂ. ಪಡೆದು ಅಮ್ರನ್ ನೀಡಿದ್ದರು.
ಈ ಮಧ್ಯೆ ಪತ್ನಿ ಅಮ್ರನ್ ಗಮನಕ್ಕೆ ಬಾರದಂತೆ 2025ರ ಜ. 3ರಂದು ಎರಡನೇ ಮದುವೆಯಾದ ಆದಿಲ್ ಜ. 4ರಂದು ಎರಡನೇ ಪತ್ನಿ ಜತೆಗೆ ದುಬಾಯಿಗೆ ತೆರಳಿದ್ದ. ಅದನ್ನರಿತು ಪತಿಗೆ ಕರೆ ಮಾಡಿದಾಗ ನಾನು ಎರಡನೇ ಮದುವೆಯಾಗಿದ್ದು ನಿನಗೆ ತಲಾಖ್ ನೀಡುವುದಾಗಿ ಹೇಳಿ ಮೂರು ಬಾರಿ ತಲಾಖ್ ಎಂದು ಉಚ್ಚರಿಸಿದ್ದಾಗಿ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅಮ್ರನ್ ತಿಳಿಸಿದ್ದಾರೆ.