
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ `ಪುತ್ತೂರು ಜಾತ್ರೆ’ ಎಂದೇ ಖ್ಯಾತಿಯಾದ ವಾರ್ಷಿಕ ಜಾತ್ರೋತ್ಸವ ಎ.೧೦ರಿಂದ ೨೦ ತನಕ ನಡೆಯಲಿದ್ದು, ಈ ಸಂಬಂಧ ಆಮಂತ್ರಣ ಪತ್ರವನ್ನು ದೇವಳದ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಬಿಡುಗಡೆ ಮಾಡಲಾಯಿತು.
ಲಕ್ಷಾಂತರ ಮಂದಿ ಭಾಗವಹಿಸುವ ಈ ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಎ.೧ರಂದು ಗೊನೆ ಮುಹೂರ್ತ ನಡೆಯಲಿದ್ದು, ಅಲ್ಲಿಂದ ಜಾತ್ರಾ ಸಂಪನ್ನದ ತನಕ ಯಾವುದೇ ವಿಘ್ನಗಳು ಉಂಟಾದಂತೆ ದೇವರು ಯಶಸ್ವಿಯಾಗಿ ನಡೆಸಿಕೊಡುವಂತೆ ಪ್ರಾರ್ಥನೆ ನಡೆಸಲಾಯಿತು. ಜಾತ್ರೆಯ ಸಂದರ್ಭ ಅನ್ನದಾನ ಅಕ್ಷಯವಾಗಿ ಬೆಳಗುವಂತೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ದೇವರ ಪೂರ್ಣಾನುಗ್ರಹ ದೊರೆಯುವಂತೆ ದೇವಳದ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್.ಭಟ್ ಅವರು ಆಮಂತ್ರಣ ಪತ್ರವನ್ನು ಗರ್ಭಗುಡಿಯಲ್ಲಿಟ್ಟು ಪ್ರಾರ್ಥಿಸಿ ಬಳಿಕ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ಈಶ್ವರ ಬೇಡೆಕರ್, ದೇವಳದ ಪ್ರಧಾನ ಅರ್ಚಕ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಸಂತ ಕೆದಿಲಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
`ಬ್ರಹ್ಮರಥೋತ್ಸವ’ ಸೇವಾ ರಶೀದಿಗೆ ಚಾಲನೆ
ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದೇವರಿಗೆ ವಿವಿಧ ಪ್ರಮುಖ ಸೇವೆಗಳನ್ನು ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಎ.೧೭ರಂದು ಬ್ರಹ್ಮರಥೋತ್ಸವ ಸೇವೆಗೆ ರೂ. ೨೫ಸಾವಿರ, ಎ ೧೬ಕ್ಕೆ ಸಣ್ಣರಥೋತ್ಸವ ಸೇವೆಗೆ ರೂ. ೧೫ಸಾವಿರ, ಎ.೧೬ಕ್ಕೆ ವಿಶೇಷ ಪಾಲಕಿ ಸೇವೆಗೆ ರೂ. ೧೫ಸಾವಿರ, ಗರ್ಭಗುಡಿ ಪುಷ್ಪಾಲಂಕಾರ ಸೇವೆಗೆ ರೂ. ೧೦ಸಾವಿರ, ಗುಡಿಗಳಿಗೆ ಪುಷ್ಪಾಲಂಕಾರ ಸೇವೆಗೆ ರೂ. ೫ಸಾವಿರ, ಲಡ್ಡು ಪ್ರಸಾದ ರೂ. ೫೦ ಮತ್ತು ಅನ್ನದಾನ ಸೇವೆ, ಶಾಶ್ವತ ಸೇವೆಗೆ ಅವಕಾಶ ನೀಡಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಬ್ರಹ್ಮರಥೋತ್ಸವದ ಸೇವೆಗೆ ಪ್ರಥಮ ರಶೀದಿಯನ್ನು ಪಡೆದು ಚಾಲನೆ ನೀಡಿದರು.