ಉಡುಪಿ: ಮೈಕ್​ಗೆ ಅನುಮತಿ ಪಡೆದಿಲ್ಲವೆಂದು ಯಕ್ಷಗಾನ ನಿಲ್ಲಿಸಿದ ಪೊಲೀಸರು..!!

Share with

ಮೈಕ್​​ ಹಚ್ಚಲು ಅನುಮತಿ ಪಡೆದಿಲ್ಲ ಎಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪೊಲೀಸರಿಂದ ತಡೆದಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುನಲ್ಲಿ ನಡೆದಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ತಡೆಯಲಾಗಿದ್ದು, ಆಯೋಜಕರನ್ನು ಅರೆಸ್ಟ್ ಮಾಡಲು ಮುಂದಾದಾಗ ಎಲ್ಲಾ ಗ್ರಾಮಸ್ಥರನ್ನು ಬಂಧನ ಮಾಡಿ ಎಂದು ಸ್ಥಳದಲ್ಲಿ ಹೈಡ್ರಾಮಾವೇ ನಡೆದಿದೆ.

ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಆಯೋಜನೆ ಮಾಡಲಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಅಜೆಕಾರು ಠಾಣಾ ಉಪ ನಿರೀಕ್ಷಕ ಶುಭಕರ ಅವರಿಂದ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರು ದಾಖಲಾದ ಬಗ್ಗೆ ಎಫ್​ಐಆರ್​ ತೋರಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಸ್ಥಳದಿಂದ ತೆರಳಿದ್ದಾರೆ.

ಆಯೋಜಕರು ಜ.10 ರಂದು ಪರವಾನಿಗೆಗಾಗಿ ಪಿಡಿಓ ಬಳಿ ತೆರಳಿದ್ದರು. ಆದರೆ 3 ದಿನಗಳು ಪಿಡಿಓ ರಜೆ ಮೇಲೆ ತೆರಳಿದ್ದಕ್ಕಾಗಿ ಅನುಮತಿ ದೊರೆತಿರಲಿಲ್ಲ. ಬಳಿಕ ಜನವರಿ 13ರಂದು ಅನುಮತಿಗಾಗಿ ಅಜೆಕಾರು ಠಾಣೆಗೆ ಆಯೋಜಕರು ಹೋಗಿದ್ದಾರೆ. ಆದರೆ ಪಂಚಾಯತ್ ಅನುಮತಿ ತರುವಂತೆ ಪೊಲೀಸರು ತಾಕೀತು ಮಾಡಿದ್ದರು.

ಸದ್ಯ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ. ಮಹಾಲಕ್ಷ್ಮೀ ಸೌಂಡ್ಸ್​​ನ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್​ ದಾಖಲಿಸಿದ್ದು, ಸುಪ್ರೀಂ ಕೋರ್ಟ್​ ಆದೇಶದ ಕ್ರಮಕ್ಕೆ ಉಡುಪಿ ಪೊಲೀಸರು ಮುಂದಾಗಿದ್ದಾರೆ.

ಸದ್ಯ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆದೇಶ ಪಾಲಿಸದಿದ್ದರೆ ಆಯಾ ಠಾಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಎಚ್ಚರಿಸಿದ್ದು, ಇದೀಗ ಪೊಲೀಸರಿಗೆ ಆರಾಧನಾ ಕಲೆ ವಿರುದ್ಧ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.


Share with

Leave a Reply

Your email address will not be published. Required fields are marked *