ಬೆಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಸ್ವದೇಶ್ ದರ್ಶನ್ ಯೋಜನೆಗೆ ಕರ್ನಾಟಕದ ಎರಡು ಪ್ರವಾಸೋದ್ಯಮ ಸಂಭಾವ್ಯ ತಾಣಗಳಾದ ಬೀದರ್ ಮತ್ತು ಉಡುಪಿಯನ್ನು ಆಯ್ಕೆ ಮಾಡಿದೆ.

ಸ್ವದೇಶ್ ದರ್ಶನ್ ಯೋಜನೆಯ ಭಾಗವಾಗಿ ಈ ಎರಡು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ, ಹೆಚ್ಚಿನ ಸೌಲಭ್ಯಗಳೊಂದಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುವಂತೆ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ಸ್ವದೇಶ್ ದರ್ಶನ್ ಯೋಜನೆಗೆ, ಪ್ರವಾಸೋದ್ಯಮ ಸಚಿವಾಲಯವು ದೇಶದ 42 ತಾಣಗಳನ್ನು ಪಟ್ಟಿ ಮಾಡಿದ್ದು ಅವುಗಳಲ್ಲಿ ಬೀದರ್ ಮತ್ತು ಉಡುಪಿಯನ್ನು ಆಯ್ಕೆ ಮಾಡಿದ್ದು, ಕ್ರಮವಾಗಿ 25 ಕೋಟಿ ಮತ್ತು 10 ಕೋಟಿ ರೂ. ಅನುದಾನ ನೀಡಲಿದೆ.