ಪ.ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಜಯ..; ಚುರುಮುರಿ ಹಂಚಿ ಬಿಜೆಪಿ ಸಂಭ್ರಮ

Share with

ಮಂಗಳೂರು: ಪಶ್ಚಿಮ ಬಂಗಾಲ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಬಳಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಸಿಹಿ ಹಂಚುವ ಜತೆಯಲ್ಲೇ, ಪ್ರಧಾನಿ ಮೋದಿಯವರು ಬಂಗಾಲದಲ್ಲಿ ರಸ್ತೆ ಬದಿ ಅಂಗಡಿಯಲ್ಲಿ ಚುರುಮುರಿಯನ್ನೇ ಹೋಲುವ ಜಲ್‌ವುರಿ ತಿಂದದ್ದನ್ನು ನೆನಪಿಸುವುದಕ್ಕೆ ಚುರುಮುರಿಯನ್ನೂ ಹಂಚಿ ಕಾರ್ಯಕರ್ತರು ಖುಷಿಪಟ್ಟರು.

ಈ ವೇಳೆ ಸಂಸದ ಕ್ಯಾ | ಬ್ರಿಜೇಶ್ ಚೌಟ ಮಾತನಾಡಿ, ಕಳೆದ 12 ವರ್ಷಗಳ ಮೋದಿಯವರ ನೇತೃತ್ವದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ, ಹಾಗೂ ಬಂಗಾಲದಲ್ಲಿ ಸನಾತನ ಸಂಸ್ಕೃತಿ ವಿರುದ್ಧ ಇರುವ ಟಿಎಂಸಿಯ ಧೋರಣೆ ಸಹಿಸದೆ ಮತದಾರರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಬಂಗಾಲದಲ್ಲಿ ಕಮಲ ಅರಳ ಬೇಕು ಎಂದು ಶ್ರಮ ಹಾಕಿದ್ದರಿಂದ ಬಹುಮತ ಬಂದಿದೆ. ಐದೂ ರಾಜ್ಯಗಳ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಅಸ್ಸಾಂ, ಪುದುಚೇರಿ, ಪ. ಬಂಗಾಲದಲ್ಲಿ ಬಿಜೆಪಿಯು ಅದ್ಭುತ ಗೆಲುವು ಸಾಧಿಸಿದೆ. ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ನಾಡಿನಲ್ಲಿ ಕಮಲ ಅರಳಿರುವುದು ದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಜಯಕ್ಕೆ ಕಾರಣೀಭೂತರಾದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ನರೇಂದ್ರ ಮೋದಿ, ಅಮಿತ್ ಶಾ, ಸುವೆಂದು ಅಧಿಕಾರಿ ಸಹಿತ ಪ್ರಮುಖರು, ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ವಿಕಾಸ್ ಪುತ್ತೂರು, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಸಂಜಯ್ ಪ್ರಭು, ರವಿಶಂಕರ ಮಿಜಾರ್, ನಂದನ್ ಮಲ್ಯ, ಕವಿತಾ ಸನಿಲ್, ಪೂರ್ಣಿಮಾ, ಶಕೀಲ ಕಾವ, ಮನೋಹರ್, ವಸಂತ ಪೂಜಾರಿ, ಲೀಲಾವತಿ, ವೀಣಾ ಮಂಗಳ, ಸಂಧ್ಯಾ ವೆಂಕಟೇಶ್ ಮೊದಲಾದವರಿದ್ದರು.


Share with

Leave a Reply

Your email address will not be published. Required fields are marked *