
ಉಡುಪಿ: ಪ್ರಜ್ವಲ್ ರೇವಣ್ಣ ಅವರ ರಾಸಲೀಲೆಗಳ ಪೆನ್ ಡ್ರೈವ್ ಸುದ್ದಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಇಷ್ಟು ದೊಡ್ಡ ಹಗರಣ ನಡೆದ ಮೇಲೂ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷವನ್ನು ಇನ್ನೂ ಮೈತ್ರಿಯೊಂದಿಗೆ ಆಲಂಗಿಸಿಕೊಂಡು ಮುಂದುವರಿಯಲಿದೆಯೇ? ದೇಶವನ್ನೇ ತಲ್ಲಣಗೊಳಿಸಿದ ಈ ಹಗರಣವು ತಮ್ಮ ಪಕ್ಷದ ಮೇಲೆ ಏನೂ ಪರಿಣಾಮ ಬೀರಲಿಲ್ಲವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಮಾತ್ರವಲ್ಲ, ತನ್ನ ಗುಟ್ಟು ಬಯಲಾದ ತಕ್ಷಣ ಜರ್ಮನಿಗೆ ಪಲಾಯನಗೈದಿರುವ ಆತನನ್ನು ತಕ್ಷಣ ಭಾರತಕ್ಕೆ ಬರುವಂತೆ ಆದೇಶ ನೀಡಬೇಕು. ಯಾವುದೇ ಕಾರಣಕ್ಕೂ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಾಗಬಾರದು. ಆತನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತವಾದ ನ್ಯಾಯ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.
ಇಂತಹ ಕೃತ್ಯವು ಅನ್ಯಕೋಮಿನವರಿಂದ ನಡೆದಿದ್ದರೆ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲಿ ಬಿಜೆಪಿ ತನ್ನ ಉಗ್ರ ಸ್ವರೂಪವನ್ನು ತೋರಿಸುತ್ತಿತ್ತು. ಇತ್ತೀಚೆಗೆ ನಡೆದ ನೇಹಾ ಕೊಲೆ ಪ್ರಕರಣವೇ ಇದಕ್ಕೆ ಸಾಕ್ಷಿ. ಮೋದಿ, ಅಮಿತ್ ಷಾ ಆದಿಯಾಗಿ ಬಿಜೆಪಿಯ ಎಲ್ಲಾ ನಾಯಕರೂ ಈ ಪ್ರಕರಣವನ್ನು ಎಳೆದು ತರುವ ಪ್ರಯತ್ನವನ್ನು ಮಾಡಿದ್ದರು. ಲೋಕಸಭಾ ಚುನಾವಣೆಗೆ ನೇಹಾ ಪ್ರಕರಣ ಒಂದು ಅಸ್ತ್ರ ವಾಗಿತ್ತು. ಆದರೆ ಇದೀಗ ಬಯಲಿಗೆ ಬಂದಿರುವ ಪ್ರಜ್ವಲ್ ರೇವಣ್ಣ ಅವರ ಈ ಲೈಂಗಿಕ ಹಗರಣದ ಬಗ್ಗೆ, ಬಿಜೆಪಿಯ ಯಾವ ನಾಯಕರೂ ಚಕಾರವೆತ್ತುತ್ತಿಲ್ಲ. ನೇಹಾ ಕೊಲೆ ನಿಜಕ್ಕೂ ಖಂಡನೀಯ. ಆಕೆಯ ದಾರುಣ ಹತ್ಯೆಗೆ ಕಾರಣನಾದ ಆರೋಪಿಗೆ ಕಠೋರ ಶಿಕ್ಷೆಯಾಗಲೇಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ನಾಯಕಿಯರಾದ ಜ್ಯೋತಿ ಹೆಬ್ಬಾರ್, ಅಮೃತಾ ಕೃಷ್ಣಮೂರ್ತಿ ಇದ್ದರು.




