ಸ್ಟಾರ್ ನಟರು ಎಂಥಹಾ ಸಿನಿಮಾ ಮಾಡಿದರೂ ದೊಡ್ಡ ಗಳಿಕೆ ಮಾಡುತ್ತವೆ. ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ಕಮರ್ಶಿಯಲ್, ಮೈಂಡ್ಲೆಸ್ ಆಕ್ಷನ್ ಸಿನಿಮಾಗಳು, ಐಟಂ ಹಾಡುಗಳು (Item Song) ಬೇಕಷ್ಟೆ ಎನ್ನಲಾಗುತ್ತಿತ್ತು. ಭಾರತದ ಹಲವು ಸಿನಿಮಾ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ಇಂದಿಗೂ ಇದನ್ನೇ ನಂಬಿ ಕೊಂಡಿದ್ದಾರೆ. ಆದರೆ ಭಾರತೀಯ ಪ್ರೇಕ್ಷಕರು ನಿಧಾನವಾಗಿ ಗುಣಮಟ್ಟದ ಕಂಟೆಂಟ್, ಗುಣಮಟ್ಟದ ಪ್ರೊಡಕ್ಷನ್, ಒಳ್ಳೆಯ ಸ್ಟೋರಿ ಟೆಲ್ಲಿಂಗ್ನತ್ತ ಜಾರುತ್ತಿದ್ದಾರೆ. ಇದಕ್ಕೆ ಸಾಕ್ಷಿ, ಇತ್ತೀಚೆಗೆ ಬಿಡುಗಡೆ ಆದ ಮೂರು ಹಾಲಿವುಡ್ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮಾಡಿರುವ ಅಭೂತಪೂರ್ವ ಕಲೆಕ್ಷನ್.
‘ಅಬ್ಸೆಷನ್ಸ್’, ‘ದಿ ಆಡಸ್ಸಿ’ ಮತ್ತು ವಾರದ ಹಿಂದೆ ಬಿಡುಗಡೆ ಆದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಮೊತ್ತವನ್ನು ಗಳಿಕೆ ಮಾಡಿವೆ. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ನ (MCU) ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಕಳೆದವಾರವಷ್ಟೆ ಭಾರತದಲ್ಲಿ ಬಿಡುಗಡೆ ಆಗಿದ್ದು, ಒಂದು ವಾರದಲ್ಲಿ ಈ ಸಿನಿಮಾ 350 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಸಿನಿಮಾ, ಭಾರತದಲ್ಲಿ ಭಾರತೀಯ ಸೂಪರ್ ಸ್ಟಾರ್ ನಟರ ಹಿಟ್ ಸಿನಿಮಾಗಳ ದಾಖಲೆಯನ್ನೂ ಸಹ ಪುಡಿಗಟ್ಟಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಇನ್ನಷ್ಟು ಹೊಸ ದಾಖಲೆಗಳನ್ನು ನಿರ್ಮಿಸುವುದು ಖಾತ್ರಿ.
ಕ್ರಿಸ್ಟೋಫರ್ ನೋಲನ್ ಸಿನಿಮಾಗಳು ಹೈ ಐಕ್ಯೂ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುವ ಸಿನಿಮಾಗಳು. ಅವರ ಸಿನಿಮಾಗಳಲ್ಲಿ ಕಮರ್ಶಿಯಲ್ ಅಂಶಗಳು ಇರುವುದಿಲ್ಲ. ಆದರೂ ಸಹ ಅವರ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಭಾರತದಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಈಗಲೂ ಮಾಡುತ್ತಿದೆ. ಜುಲೈ ಮಧ್ಯ ಭಾಗದಲ್ಲಿ ಬಿಡುಗಡೆ ಆದ ಈ ಸಿನಿಮಾ ಈ ವರೆಗೆ ಭಾರತದಲ್ಲಿ 150 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ‘ಸ್ಪೈಡರ್ ಮ್ಯಾನ್’ ಸಿನಿಮಾದಿಂದ ಇದರ ಗಳಿಕೆಗೆ ತುಸು ಬ್ರೇಕ್ ಬಿದ್ದಿತಾದರೂ, 150 ಕೋಟಿ ಕಡಿಮೆ ಮೊತ್ತವೇನಲ್ಲ. ಬೆಂಗಳೂರು ಸೇರಿದಂತೆ ಕೆಲವು ನಗರಗಳ ಚಿತ್ರಮಂದಿರಗಳಲ್ಲಿ ಈಗಲೂ ಸಿನಿಮಾದ ಶೋಗಳು ಹೌಸ್ಫುಲ್ ಆಗುತ್ತಿವೆ.
ಇನ್ನು ‘ಅಬ್ಸೆಷನ್ಸ್’ ಸಿನಿಮಾನಲ್ಲಂತೂ ಯಾವ ದೊಡ್ಡ ಹಾಲಿವುಡ್ ಸ್ಟಾರ್ ಆಗಲಿ, ತಂತ್ರಜ್ಞರಾಗಲಿ ಇರಲಿಲ್ಲ. ಕೇವಲ ಕಂಟೆಂಟ್ ಅನ್ನಷ್ಟೆ ಹೊಂದಿದ್ದ ಸಿನಿಮಾ ಇದಾಗಿತ್ತು. ಈ ಸಿನಿಮಾ ಸಹ ಭಾರತದಲ್ಲಿ ಬಹಳ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ‘ಅಬ್ಸೆಷನ್’ ಹಾಲಿವುಡ್ ಹಾರರ್ ಸಿನಿಮಾ ಸರಿ ಸುಮಾರು 85 ಕೋಟಿಗೂ ಹೆಚ್ಚು ಮೊತ್ತವನ್ನು ಭಾರತದಲ್ಲಿ ಗಳಿಕೆ ಮಾಡಿದೆ.
ಈ ಮೂರೂ ಸಿನಿಮಾಗಳು ಇದೇ ವರ್ಷ ಭಾರತದಲ್ಲಿ ಬಿಡುಗಡೆ ಆಗಿದ್ದು, ಮೂರು ಸಿನಿಮಾಗಳ ಈ ವರೆಗಿನ ಒಟ್ಟು ಗಳಿಕೆ 500 ಕೋಟಿ ದಾಟಿದೆ. ‘ಸ್ಪೈಡರ್ ಮ್ಯಾನ್’ ಸಿನಿಮಾ ಬಿಡುಗಡೆ ಆಗಿ ಒಂದು ವಾರವಷ್ಟೆ ಆಗಿದ್ದು, ಈ ಸಿನಿಮಾ ಏಕಾಂಗಿಯಾಗಿ 700 ಕೋಟಿಗೂ ಹೆಚ್ಚು ಗಳಿಸುವ ನಿರೀಕ್ಷೆ ಇದೆ. ಒಟ್ಟಾರೆ, ಭಾರತೀಯ ಪ್ರೇಕ್ಷಕ ಗುಣಮಟ್ಟದ ಕಂಟೆಂಟ್ ಕಡೆಗೆ ವಾಲುತ್ತಿದ್ದು, ಒಳ್ಳೆಯ ಸಿನಿಮಾ ನೋಡಲು ದೊಡ್ಡ ಮೊತ್ತವನ್ನು ನೀಡಲು ಸಹ ತಯಾರು ಎಂಬುದನ್ನು ಈ ಸಿನಿಮಾಗಳ ಕಲೆಕ್ಷನ್ ಲೆಕ್ಕಾಚಾರ ಹೇಳುತ್ತಿದೆ. ಜೊತೆಗೆ ಇದು ಭಾರತೀಯ ಚಿತ್ರರಂಗದ ಸಿನಿಮಾ ಕರ್ಮಿಗಳಿಗೆ ಎಚ್ಚರಿಕೆಯೂ ಆಗಿದೆ.





