
ಉಡುಪಿ: ಜಿಲ್ಲೆಯಲ್ಲಿ ಸಿಎನ್ ಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಆಟೊ ಚಾಲಕ/ಮಾಲೀಕರು ಹೈರಾಣಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಕೇವಲ 4 ಪೂರೈಕೆ ಕೇಂದ್ರಗಳಿದ್ದು ಎಲ್ಲಾ ಕಡೆಗಳಲ್ಲೂ ಪೂರೈಕೆ ಕಡಿತ ಆಗಿದೆ. ರಿಕ್ಷಾ ಚಾಲಕರು ಗ್ಯಾಸ್ ತುಂಬಿಸಲು ರಾತ್ರಿ ಹಗಲು ಎನ್ನದೆ ಸುಮಾರು 3 ರಿಂದ 4 ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕೂಡಲೇ ನಿರ್ಬಂಧ ತೆರವುಗೊಳಿಸಿ ಪಂಪ್ ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಆಟೋ ಸಂಘಟನೆಗಳಿಂದ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಸಿ ಎನ್ ಜಿ ಆಟೋ ರಿಕ್ಷಾ ಇದ್ದು, ಉಡುಪಿ ತಾಲೂಕಿನಲ್ಲಿ 1500 ಕ್ಕೂ ಅಧಿಕ ಸಿಎನ್ ಜಿ ಆಟೋ ರಿಕ್ಷಾಗಳಿವೆ. ಉಡುಪಿ ತಾಲೂಕಿನಲ್ಲಿ ಗುಂಡಿಬೈಲ್, ಮಲ್ಪೆ ಹಾಗೂ ಬ್ರಹ್ಮಾವರದಲ್ಲಿ ಸಿಎನ್ ಜಿ ಪಂಪ್ ಗಳಿವೆ. ಅದರಲ್ಲಿ ಈ ಪಂಪ್ ಗಳಲ್ಲಿ ಸಮರ್ಪಕವಾಗಿ ಇಂಧನ ಸಿಗದೆ ರಿಕ್ಷಾ ಚಾಲಕರು ಪರದಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ದಿನವೇ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಕಂಪೆನಿಯ ಅಧಿಕಾರಿಗಳನ್ನು ಸಹ ಕರೆದು ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಯಶೋಧ ಆಟೋ ಯೂನಿಯನ್ ಜಿಲ್ಲಾ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಸಿಐಟಿಯುಗೆ ಸೇರಿದ ಆಟೊ ಸಂಘಟನೆಗಳ ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ/ಬ್ರಹ್ಮಾವರ ತಾಲೂಕು ಆಟೊ ಚಾಲಕರ ಸಂಘದ ಗೌರವ ಅಧ್ಯಕ್ಷರಾದ ರಾಜು ಪೂಜಾರಿ, ಅಧ್ಯಕ್ಷರಾದ ರಾಜು ಸಾಲಿಯಾನ್, ಅಶ್ರಫ್, ನಾಗೇಶ್, ಉಮೇಶ್ ಪೂಜಾರಿ, ಉದಯ ಪೂಜಾರಿ, ಸದಾಶಿವ ಶೆಟ್ಟಿ ಮತ್ತಿತರರು ಇದ್ದರು.




