ವೈದ್ಯರ ‌ನಿರ್ಲಕ್ಷ್ಯದಿಂದ ಬಾಣಂತಿ ಸಾವು, ಆರೋಪ; ರಣರಂಗವಾದ ಎ.ಜೆ ಆಸ್ಪತ್ರೆ ಆವರಣ

Share with

ಮಂಗಳೂರು (ಜು.26): ಖಾಸಗಿ ಆಸ್ಪತ್ರೆ ವೈದ್ಯರ ‌ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪಿಸಿ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ‌‌ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮೃತದೇಹ ಆಸ್ಪತ್ರೆಯಿಂದ ಸಾಗಿಸಲು ಬಿಡದೇ ಕುಟುಂಬಸ್ಥರು ಮತ್ತು ಸಾರ್ವಜನಿಕರು ಹಾಗೂ ವಿಶ್ವಕರ್ಮ ಸಮುದಾಯದ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ‌ನೂಕಾಟ ತಳ್ಳಾಟ ನಡೆದು ಮಂಗಳೂರಿನ ಕುಂಟಿಕಾನ ಬಳಿಯ ಎ.ಜೆ.‌ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣ ರಣರಂಗವಾಗಿದೆ.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ (36) ಮೃತಪಟ್ಟವರಾಗಿದ್ದು, ಜು. 2ರಂದು ಹೆರಿಗೆ ನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆವತ್ತು ಸಿಜೆರಿನ್ ಮಾಡಿ ಡೆಲೆವರಿ ಮಾಡಬೇಕೆಂದು ಡ್ಯೂಟಿ ಡಾಕ್ಟರ್ ಹೇಳಿದ್ದು, ಆದರೆ ವೈದ್ಯೆ ವೀಣಾಗೆ ಕರೆ ಮಾಡಿದಾಗ ಭಾನುವಾರ ಆಗಿರುವುದರಿಂದ ಬಂದಿಲ್ಲವಂತೆ.

ಹೀಗಾಗಿ ಅದೇ ದಿನ ವೀಣಾ ಅನುಪಸ್ಥಿತಿಯಲ್ಲಿ ಬೇರೆ ವೈದ್ಯರು ಶಿಲ್ಪಾರವರನ್ನು ಸಿಜೆರಿನ್ ಮಾಡಿ ಡೆಲಿವರಿ ಮಾಡಿದ್ದು, ಹೆಣ್ಣು ಮಗು ಆಗಿದೆ. ಆದರೆ ಗರ್ಭಕೋಶವನ್ನು ತೆಗೆಯಬೇಕಾಗುತ್ತದೆ ಎಂದಿದ್ದಾರೆ. ಆ ಬಳಿಕ ಎರಡು ದಿನಗಳ ನಂತರ ಶಿಲ್ಪಾರವರಿಗೆ ಜ್ವರ ಬಂದಿದೆ ಎಂದು ಚಿಕಿತ್ಸೆ ನೀಡಿದ್ದು, 5 ದಿನಗಳ ನಂತರ ಬ್ರೆನ್ ಮೇಜ‌ರ್ ಡ್ಯಾಮೇಜ್ ಆಗಿದೆ ಎಂದಿದ್ದಾರೆ. 

ಜು. 25ರಂದು ಐಸಿಯುನಲ್ಲಿ ಶಿಲ್ಪಾ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಬೇರೆ ವೈದ್ಯರಿಂದ ಡೆಲಿವರಿ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಶಿಲ್ಪಾ ಪತಿ ಪ್ರದೀಪ್ ಆಚಾರ್ಯ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎ.ಜೆ ಆಸ್ಪತ್ರೆಯ ವೈದ್ಯರಾದ ವೀಣಾ ಭಗವಾನ್ ಹಾಗೂ ಡೀನ್ ಅಶೋಕ ಹೆಗಡೆ, ಅನಸ್ತೇಶಿಯಾ ಡಾ.ಗುರುರಾಜ್ ತಂತ್ರಿ, ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ನಿರ್ಲಕ್ಷತನವೇ ಕಾರಣ ಎಂದು ದೂರು ನೀಡಿದ್ದಾರೆ. ಸದ್ಯ ಸೆಕ್ಷನ್ 174(3)(vi) ಸಿ.ಆರ್‌.ಪಿ‌.ಸಿ ಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಂದು ಮರಣೋತ್ತರ‌ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಈ ವೇಳೆ ಎ.ಜೆ. ಆಸ್ಪತ್ರೆ ಬಳಿ ಮೃತದೇಹ ತಡೆದು ಸಂಬಂಧಿಕರು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಸ್ಥಳಕ್ಕೆ ಬರುವಂತೆ ಮಳೆಯ ಮಧ್ಯೆಯೇ ಪ್ರತಿಭಟನೆ ನಡೆಸಿದ್ದಾರೆ. ಆಂಬ್ಯುಲೆನ್ಸ್ ತಡೆದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತಳ್ಳಾಟ, ನೂಕಾಟ ನಡೆದಿದೆ. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೂ ಪೊಲೀಸ್ ಬಲ ಪ್ರಯೋಗಿಸಿ ಪೊಲೀಸರು ಮೃತದೇಹ ಸಾಗಿಸಿದ್ದಾರೆ.


Share with

Leave a Reply

Your email address will not be published. Required fields are marked *