
ರಾಷ್ಟ್ರೀಯ ಆರೋಗ್ಯಕರ ಆಹಾರ ದಿನವನ್ನು ಪ್ರತಿವರ್ಷ ನವೆಂಬರ್ ಮೊದಲ ಬುಧವಾರ ಆಚರಿಸಲಾಗುತ್ತದೆ. ಅಂದರೆ ಈ ಬಾರಿ ನ. 6 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದ ಉದ್ದೇಶ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯ ಬಗ್ಗೆ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದಾಗಿದೆ. ಈ ದಿನ ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡುವುದರ ಮೂಲಕ ಸಕ್ಕರೆ ಪಾನೀಯಗಳು, ಅತಿಯಾಗಿ ಉಪ್ಪು ಹಾಕಿದ ಪ್ಯಾಕ್ ಮಾಡಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೆ ಪರಿಸರ, ಕೃಷಿ, ಪ್ರಾಣಿಗಳು ಮತ್ತು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬೆಳೆಯುವ, ಕೊಯ್ಲು ಮಾಡುವ ಮತ್ತು ಅದನ್ನು ಉಣಬಡಿಸುವ ಜನರ ಬಗ್ಗೆ ಕಾಳಜಿ ವಹಿಸುವುದು ಈ ದಿನದ ಗುರಿಯಾಗಿದೆ. ಹಾಗಾದರೆ ರಾಷ್ಟ್ರೀಯ ಆಹಾರ ದಿನವನ್ನು ಆಚರಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ರಾಷ್ಟ್ರೀಯ ಆಹಾರ ದಿನವನ್ನು ಹೇಗೆ ಆಚರಿಸುವುದು?
*ಆಹಾರದ ಪ್ಯಾಕೆಟ್ ಹಿಂದೆ ಇರುವ ಲೇಬಲ್ ಗಳನ್ನು ಓದಿ ಬಳಿಕ ಖರೀದಿಸಿ. ಏಕೆಂದರೆ ನೀವು ಪ್ರತಿದಿನ ತಿನ್ನುವ ಆಹಾರ ಎಲ್ಲಿಂದ ಬರುತ್ತದೆ, ಅದರಲ್ಲಿ ಏನಿದೆ ಮತ್ತು ಯಾವ ಪದಾರ್ಥಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
*ನೀವು ಹಿಂದೆಂದೂ ತಿನ್ನದ ಆಹಾರವನ್ನು ತಿನ್ನಲು ಪ್ರಯತ್ನಿಸಿ. ಆದರೆ ಅದು ಆರೋಗ್ಯಕರವಾಗಿರಲಿ.
*ಅಡುಗೆಗೆ ಬಳಸುವುದಕ್ಕೆ ಅನುಕೂಲವಾಗುವಂತೆ ನಿಮ್ಮ ಮನೆಯಲ್ಲಿ ಅನೇಕ ರೀತಿಯ ಗಿಡಮೂಲಿಕೆಗಳನ್ನು ನೆಟ್ಟು ಬೆಳೆಸಿ.
*ನಿಮ್ಮ ತೋಟಕ್ಕೆ ಬಳಸಲು ಕಾಂಪೋಸ್ಟ್ ಗಳನ್ನು ಮನೆಯಲ್ಲಿ ತಯಾರು ಮಾಡಲು ಪ್ರಾರಂಭಿಸಿ.
*ನಿಮ್ಮ ನೆಚ್ಚಿನ ಆಹಾರ ಬೇಯಿಸಲು ಆರೋಗ್ಯಕರ ಮಾರ್ಗವನ್ನು ಕಂಡುಕೊಳ್ಳಿ.
*ನಿಮ್ಮ ನೆಚ್ಚಿನ ಕೆಲವು ಆರೋಗ್ಯಕರ ಆಹಾರಗಳನ್ನು ಆನಂದಿಸಿ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು #NationalFoodDay ಬಳಸಿ.




