ಮಂಗಳೂರು: ಕದ್ರಿ ದೇವಸ್ಥಾನ ರಸ್ತೆಯ ಕದ್ರಿ ಮಾರ್ಟ್ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.

ಕದ್ರಿ ದೇವಸ್ಥಾನ ರಸ್ತೆಯ ಕದ್ರಿ ಮಾರ್ಟ್ ಬಳಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ವ್ಯಕ್ತಿ ಸುಮಾರು 45-50 ವರ್ಷ ಪ್ರಾಯದವರಾಗಿದ್ದು, 5.7 ಅಡಿ ಎತ್ತರ, ಗೋಧಿ ಮೈಬಣ್ಣವಿದೆ. ಎಡ ಕೈಯಲ್ಲಿ ಉಪೇಂದ್ರ, ಬಲ ಎದೆಯಲ್ಲಿ ಉಮೇಶ್ ಹಾಗೂ ಎಡ ಎದೆಯ ಮೇಲೆ ರಮೇಶ್ ಎಂಬ ಹೆಸರಿನ ಹಚ್ಚೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಆಕಾಶ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಸೊಂಟದಲ್ಲಿ ಕೇಸರಿ ಬಣ್ಣದ ಕೇಸರಿ ಶಾಲು ಸುತ್ತಿಕೊಳ್ಳಲಾಗಿದೆ. ಈ ಚಹರೆಯ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಕದ್ರಿ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.




