ಜ್ಯುವೆಲರಿ ಸಿಬ್ಬಂದಿಯನ್ನು ಅಪಹರಿಸಿ ಚಿನ್ನದ ಗಟ್ಟಿ ದರೋಡೆ..! ನಾಲ್ವರು ಸೇರಿ ಓರ್ವ ಬಾಲಕನ ಬಂಧನ

Share with

ಮಂಗಳೂರು: ಹಂಪನಕಟ್ಟೆಯ ಚಿನ್ನದ ಅಂಗಡಿಯೊಂದರಲ್ಲಿನ ಕಚೇರಿ ಕೆಲಸಗಾರನ (ಸಿಬಂದಿ) ಅಪಹರಿಸಿ,1.5 ಕೋ.ರೂ.ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿ ದರೋಡೆ ನಡೆಸಿರುವ ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳು ಸೇರಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಸೋಮವಾರ (ಸೆ.29) ರಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ ಕೋಟೆಕಾರು ನಿವಾಸಿ ಫಾರಿಶ್ (18), ಉಳ್ಳಾಲ ಮುಕ್ಕಚೇರಿ ನಿವಾಸಿ ಸಫ್ಘಾನ್ (23), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ (18), ಉಳ್ಳಾಲ ದರ್ಗಾ ಬಳಿಯ ಫರಾಝ್ (19) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಎನ್ನಲಾಗಿದೆ.

ಘಟನೆಯ ವಿವರ:

ಸೆ.26ರಂದು ರಾತ್ರಿ 8.30ರ ಸುಮಾರಿಗೆ ಚಿನ್ನದ ಅಂಗಡಿಯಿಂದ ವಾರದಲ್ಲಿ ಶೇಖರಣೆಯಾದ ಸುಮಾರು 1.5 ಕೋ.ರೂ. ಮೌಲ್ಯದ 1,650 ಗ್ರಾಂ ತೂಕದ ಮೆಲ್ಟ್ ಮಾಡಿದ ಚಿನ್ನವನ್ನು ಶುದ್ಧ ಚಿನ್ನವಾಗಿ ಪರಿವರ್ತಿಸಲು ರಥಬೀದಿಯ ಸಂತೋಷ್ ಎಂಬವರ ಅಂಗಡಿಗೆ ಮುಸ್ತಾಫ ತನ್ನ ಸ್ಕೂಟರ್‌ನ ಸೀಟಿನ ಅಡಿಯ ಡಿಕ್ಕಿಯಲ್ಲಿ ಇಟ್ಟು ತೆಗೆದುಕೊಂಡು ಜಿಎಚ್‌ಎಸ್ ರಸ್ತೆಯ ಮೂಲಕ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ತಲುಪಿದಾಗ ರಾತ್ರಿ ಸುಮಾರು 8.45ರ ವೇಳೆಗೆ ಹಿಂದಿನಿಂದ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮುಸ್ತಾಫ ಅವರ ಸ್ಕೂಟರ್‌ಗೆ ಅಡ್ಡ ಇಟ್ಟು ತನ್ನ ವಾಹನಕ್ಕೆ ಯಾಕೆ ಡಿಕ್ಕಿ ಹೊಡೆದದ್ದು ಎಂದು ಜಗಳ ತೆಗೆದಿದ್ದಾರೆ ಈ ವೇಳೆ ಕಾರಿನಲ್ಲಿ ಬಂದ ನಾಲ್ವರು ಮುಸ್ತಾಫ ನನ್ನು ಕಾರಿನಲ್ಲಿ ಅಪಹರಿಸಿ ಬಳಿಕ ಎಕ್ಕೂರು ಬಳಿ ಬಿಟ್ಟು ಚಿನ್ನದ ಗಟ್ಟಿಯ ಕಸಿದು ಪರಾರಿಯಾಗಿದ್ದರು.

ಪೂರ್ವ ಯೋಜಿತ ಕೃತ್ಯ:

ಇದೊಂದು ಪೂರ್ವ ಯೋಜಿಕ ಕೃತ್ಯವಾಗಿದ್ದು ದರೋಡೆ ಕೃತ್ಯದ ಪ್ರಮುಖ ಆರೋಪಿ ಫಾರಿಶ್ ಈ ಹಿಂದೆ ಇದೇ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು ಇದೇ ಅಂಗಡಿಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ, ಮುಸ್ತಾಫಾ ಅವರು ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಮಾಹಿತಿಯನ್ನು ಫಾರಿಶ್‌ಗೆ ನೀಡಿದ್ದ ಎನ್ನಲಾಗಿದೆ.

ಸದ್ಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವ ಜೊತೆಗೆ ಪ್ರಕರಣಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು ಜೊತೆಗೆ ಕೃತ್ಯಕ್ಕೆ ಬಳಸಿದ ಕಾರು ಹಾಗೂ ದರೋಡೆ ಮಾಡಿದ್ದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ.


Share with

Leave a Reply

Your email address will not be published. Required fields are marked *