ಕಲಬುರಗಿಯಲ್ಲಿ RSSಗೆ ಶಾಕ್ ಮೇಲೆ ಶಾಕ್: ಸೇಡಂ, ಕುಮ್ಮನ ಶಿರಸಗಿಯಲ್ಲೂ ಪಥಸಂಚಲನಕ್ಕೆ ಬ್ರೇಕ್

Share with

ಕಲಬುರಗಿ, ಅಕ್ಟೋಬರ್ 19: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಜಟಾಪಟಿ ಕೋರ್ಟ್ ಮೆಟ್ಟಿಲೇರಿ ಸುಖಾಂತ್ಯ ಕಂಡಿರುವ ನಡುವೆಯೂ ಕಲಬುರಗಿಯ ವಿವಿಧೆಡೆ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿರುವ ಬಗ್ಗೆ ವರದಿಯಾಗುತ್ತಿವೆ. ಜಿಲ್ಲೆಯ ಸೇಡಂ ಪಟ್ಟಣದಲ್ಲಿ RSS ಪಥಸಂಚಲನಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದು, RSS ಮುಖಂಡರು ಸಲ್ಲಿಸಿದ್ದ ಮನವಿಯನ್ನ ಸೇಡಂ ತಹಶೀಲ್ದಾರ್ ಶ್ರೀಯಾಂಕಾ ತಿರಸ್ಕರಿಸಿದ್ದಾರೆ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರತಿನಿಧಿಸುವ ಸೇಡಂ ಕ್ಷೇತ್ರದಲ್ಲಿ ಇಂದು ಸಂಜೆ ಪಥಸಂಚಲನಕ್ಕೆ ಸಿದ್ಧತೆ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಸೇಡಂ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

RSS ಪಥಸಂಚಲಕ್ಕೆ ಪ್ರತಿಬಂಧಕಾಜ್ಞೆ ಜಾರಿ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನ ಶಿರಸಗಿಯಲ್ಲಿ RSS ಪಥಸಂಚಲನ ನಡೆಸದಂತೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. RSS ಹಾಗೂ ದಲಿತ ಸಂಘಟನೆ ಮಧ್ಯೆ ವೈಷಮ್ಯ ಬೆಳೆದ ಹಿನ್ನೆಲೆ ಇಂದಿನಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಯಡ್ರಾಮಿ ತಾಲೂಕು ಹಶೀಲ್ದಾರ್, ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಆದೇಶಿಸಿದ್ದಾರೆ.

ಚಿತ್ತಾಪುರದಲ್ಲಿ ಇಂದು ನಡೆಯಬೇಕಿದ್ದ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಕಾರ್ಯಕರ್ತರು ಕೋರ್ಟ್ ಮೊರೆ ಹೋಗಿದ್ದು, ಕಲಬುರಗಿ ಹೈಕೋರ್ಟ್ ಪೀಠಕ್ಕೆ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಅಕ್ಟೋಬರ್ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.


Share with

Leave a Reply

Your email address will not be published. Required fields are marked *