ನವದೆಹಲಿ: ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು 45 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದ ಮಹಿಳಾ ಪ್ರಯಾಣಿಕರಿಗೆ, ಆಯ್ಕೆ ಮಾಡದಿದ್ದರೂ ಸಹ, ಲಭ್ಯತೆಗೆ ಅನುಗುಣವಾಗಿ ಲೋವರ್ ಬರ್ತ್ ಸೀಟುಗಳನ್ನು ಸ್ವಯಂಚಾಲಿತವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ತಿಳಿಸಿದ್ದಾರೆ.

ಹಿರಿಯ ನಾಗರಿಕರು, ವಿಕಲಚೇತನ ಪ್ರಯಾಣಿಕರಿಗೆ ನೀಡಲಾದ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು, ‘ಕೆಲ ಸಂದರ್ಭಗಳಲ್ಲಿ ಲೋವರ್ ಬರ್ತ್ ಸೀಟುಗಳು ಕಾಯ್ದಿರಿಸಲ್ಪಟ್ಟಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಮಧ್ಯದ ಅಥವಾ ಮೇಲಿನ ಬರ್ತ್ಗಳಲ್ಲಿ ಸೀಟು ಕಾಯ್ದಿರಿಸಿದಂತಹ ಆಯ್ದ ಪ್ರಯಾಣಿಕರಿಗೆ ಆದ್ಯತೆಯ ಮೇರೆಗೆ ಲೋವರ್ ಬರ್ತ್ ಸೀಟು ಹಂಚಿಕೆಯಾಗುತ್ತದೆ’ ಎಂದರು.




