ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಎಸ್.ಪ್ರಭಾಕರ ಅವರು ಬುಧವಾರ ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಎಸ್.ಡಿ.ಎಂ.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸಮಯ ಕರ್ತವ್ಯ ನಿರ್ವಹಿಸಿಸಿದ್ದರು.
ಕರ್ನಾಟಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಸೂರಾಲು ಪ್ರಭಾಕರ್ ಖ್ಯಾತಿವೆತ್ತ ಹೆಸರು. ಪದವಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾಕರ್‌ರವರ ಹೆಸರನ್ನು ಗೌರವಾದರಗಳಿಂದ ಉಲ್ಲೇಖಿಸಲಾಗುತ್ತದೆ. ವೃತ್ತಿಪರ ಜೀವನವನ್ನು ಬೆಂಗಳೂರಿನ ಸರಕಾರಿ ಮಹಾರಾಣಿ ಕಾಲೇಜಿನಲ್ಲಿ ಪ್ರಾರಂಭಿಸಿದ್ದ ಪ್ರಭಾಕರ್ ಪಾಂಡಿತ್ಯ, ಗತ್ತು, ಗಾಂಭೀರ್ಯ, ಆಕರ್ಷಕ ವ್ಯಕ್ತಿತ್ವ, ಮಾತುಗಾರಿಕೆ ಎಲ್ಲವನ್ನೂ ಹೊಂದಿದ್ದರು.
ಹತ್ತಿರದ ಸಂಬಂಧಿಗಳಾದ ರತ್ನವರ್ಮ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಉಜಿರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಪದವಿ ಕಾಲೇಜಿಗೆ ಪ್ರಾಚಾರ್ಯರಾಗಿದ್ದರು. ನಗರದ ನೌಕರಿಯನ್ನು ಬಿಟ್ಟು ಧರ್ಮಸ್ಥಳಕ್ಕೆ ಬಂದು ಮನೆ ಮಾಡಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಗೆ ಮತ್ತು ನಂತರದಲ್ಲಿ ಪ್ರಾರಂಭಗೊಂಡ ಎಸ್.ಡಿ.ಎಂ ಸೊಸೈಟಿಗೆ ಜೀವ ತುಂಬಿದ್ದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶಿಯಾಗಿ, ನಿಕಟವರ್ತಿಯಾಗಿ ಅಭಿಮಾನಿಯಾಗಿ 50 ವರ್ಷಗಳ ಕಾಲ ಎಸ್.ಡಿ.ಎಂ. ಸಂಸ್ಥೆಗಳ ಏಳಿಗೆಗೆ ಕೊಡುಗೆ ನೀಡಿದ್ದರು.
ಪ್ರಭಾಕರ್‌ರವರ ತಂದೆ ಪದ್ಮನಾಭಯ್ಯ, ಉಡುಪಿಯ ಸೂರಾಲು ಅರಮನೆಯ ನಾಗೇಂದ್ರ ತೋಳಾರವರ ಅಳಿಯ. ತಾಯಿ ಪುಷ್ಪಾವತಿಯಮ್ಮ.1935ರಂದು ಜೂನ್ 28 ರಂದು ಜನಿಸಿದ್ದರು.
ಪಿಯುಸಿಯನ್ನು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಓದಿದ್ದರು.ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ(ರಾಜ್ಯ ಶಾಸ್ತ್ರ) ಪದವಿ ಶಿಕ್ಷಣವನ್ನು ಪಡೆದರು. ಮೈಸೂರು ವಿವಿಯಲ್ಲಿ 1961ರಲ್ಲಿ ಮಾನಸ ಗಂಗೋತ್ರಿಯ ಮೊದಲ ಬ್ಯಾಚ್‌ನಲ್ಲಿ ಎಂ.ಎ. (ರಾಜ್ಯಶಾಸ್ತ್ರ) ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಬ್ಯಾಂಕ್‌ಗಳಿಸಿದ್ದರು.
ಪ್ರಭಾಕರ್‌ರವರ ನಿಧಾನಕ್ಕೆ ಗಣ್ಯಾತೀಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.




