Kerala; ತ್ರಿಶೂರ್ ನಲ್ಲಿ ಕಾಂಗ್ರೆಸ್ ಜಯಭೇರಿ: ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ

Share with

ಕೇಂದ್ರ ಸಚಿವ ಸುರೇಶ್ ಗೋಪಿ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್!

ತ್ರಿಶೂ‌ರ್: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ, ಕೇರಳದ ಏಕೈಕ ಲೋಕಸಭಾ ಸಂಸದ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಪ್ರತಿನಿಧಿಸುತ್ತಿರುವ ತ್ರಿಶೂ‌ರ್ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಮೈತ್ರಿಕೂಟದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ರಾಜನ್. ಜೆ. ಪಲ್ಸನ್ ಅವರು 26803 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಒಟ್ಟು 140 ಸ್ಥಾನಗಳ ಪೈಕಿ ಯುಡಿಎಫ್ 97 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಸರಕಾರ ರಚಿಸುವತ್ತ ದಾಪುಗಾಲಿಟ್ಟಿದೆ. ಆಡಳಿತಾರೂಢ ಎಲ್ ಡಿಎಫ್ ಮುಖಭಂಗ ಅನುಭವಿಸಿದ್ದು 37 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಬಿಜೆಪಿ ಲೆಕ್ಕಾಚಾರ ತಲೆಕೆಳಗು

ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಲೆಕ್ಕಾಚಾರ ಮಾಡಿ ಮಾಜಿ ಸಿಎಂ ಕೆ .ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರನ್ನು ಕಾಂಗ್ರೆಸ್ ನಿಂದ ಕರೆತಂದು ಟಿಕೆಟ್ ನೀಡಿತ್ತು. ಅವರು 28662 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿತ್ತು. ಯುಡಿಎಫ್ ಅಲೆ ಎದುರು ಲೆಕ್ಕಾಚಾರ ತಲೆಕೆಳಗಾಗಿದೆ.

2021 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಿತ್ರ ನಟ ಸುರೇಶ್ ಗೋಪಿ ಅವರು 40,457 ಮತಗಳನ್ನು ಪಡೆದು ಮೂರನೇ ಸ್ಥಾನಿಯಾಗಿದ್ದರು. 43,317 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪದ್ಮಜಾ ವೇಣುಗೋಪಾಲ್‌ ಎರಡನೇ ಸ್ಥಾನಿಯಾಗಿದ್ದರು. ಸಿಪಿಐ ನ ಪಿ. ಬಾಲಚಂದ್ರನ್ 946 ಮತಗಳಿಂದ ಜಯ ಸಾಧಿಸಿದ್ದರು.


Share with

Leave a Reply

Your email address will not be published. Required fields are marked *