ಮಂಗಳೂರು/ಉಡುಪಿ: ಕೆಲವು ದಿನಗಳ ವಿರಾಮದ ಬಳಿಕ ಕರಾವಳಿಯಲ್ಲಿ ಬುಧವಾರದಿಂದ ಮತ್ತೆ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಂದೆರಡು ಕಡೆ ಮಂಗಳವಾರ ಲಘು ಮಳೆಯಾಗಬಹುದು. ಬುಧವಾರದಿಂದ ವಾರಾಂತ್ಯದವರೆಗೆ ಕರಾವಳಿಯಲ್ಲಿ ಸಾಧಾರಣ ಮತ್ತು ದಕ್ಷಿಣ ಒಳನಾಡಿನಾದ್ಯಂತ ಸಾಧಾರಣದಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ. ಗಾಳಿ ಮತ್ತು ಸಿಡಿಲಿನ ಅಬ್ಬರವೂ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಕೂಡ ಗುಡುಗು ಸಹಿತ ಮಳೆಯಾಗಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೋಮವಾರ ಉರಿ ಬಿಸಿಲು ಮತ್ತು ಸೆಕೆಯಿಂದ ಕೂಡಿದ ವಾತಾವರಣ ಇತ್ತು. ಬೆಳಗ್ಗೆ ಕರಾವಳಿಯ ಹೆಚ್ಚಿನ ಕಡೆ ಮೋಡದ ವಾತಾವರಣ ಇತ್ತಾದರೂ ಎಲ್ಲಿಯೂ ಮಳೆ ಸುರಿದಿಲ್ಲ. ಮೈಸೂರು ಮತ್ತು ಚಾಮರಾಜನಗರದ ವಿವಿಧೆಡೆ ಲಘು ಮಳೆಯಾಗಿರುವ ಕುರಿತಂತೆ ವರದಿಯಾಗಿದೆ.
ಮಂಗಳೂರಿನಲ್ಲಿ 34 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ.ಸೆ. ಇಳಿಕೆ ಮತ್ತು 26.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ. ಉಷ್ಣಾಂಶ ಹೆಚ್ಚಿತ್ತು.




