ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಐತಿಹಾಸಿಕ ಸಾಧನೆ ಮಾಡಿದೆ. ಪಕ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯೊಬ್ಬರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಕೋಝಿಕ್ಕೋಡ್ ಜಿಲ್ಲೆಯ ಪೆರಂಬ್ರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಫಾತಿಮಾ ತಹ್ಲಿಯಾ ಅವರು ಸಿಪಿಐ(ಎಂ) ಭದ್ರಕೋಟೆಯನ್ನು ಭೇದಿಸಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಮುಸ್ಲಿಂ ಲೀಗ್ ಕೇರಳ ರಾಜಕಾರಣದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಮುಸ್ಲಿಂ ಲೀಗ್‌ನ ಪ್ರಭಾವಿ ನಾಯಕಿಯಾಗಿದ್ದ ಫಾತಿಮಾ, ದಶಕಗಳಿಂದ ಎಡಪಕ್ಷಗಳ ವಶದಲ್ಲಿದ್ದ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದು ವಿಶೇಷ.




