ಬೆಂಗಳೂರು: ಸ್ಯಾಂಡ್ ವುಡ್ ನಟ, ನಿರ್ದೇಶಕ, ಧಾರವಾಹಿ ನಟ ದಿಲೀಪ್ ರಾಜ್(47 ವರ್ಷ) ಅವರ ನಿಧನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಎಕ್ಸ್ ಖಾತೆ ಮೂಲಕ ಬುಧವಾರ (ಮೇ 13) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಿಷಬ್ ತನ್ನ ಎಕ್ಸ್ ಖಾತೆಯಲ್ಲಿ, “ ಒಳ್ಳೆಯ ನಟ, ನಿರ್ದೇಶಕ, ನಿರ್ಮಾಪಕ, ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಒಳ್ಳೆಯ ಮನುಷ್ಯ…ಭೇಟಿಯಾದ ಸಂದರ್ಭಬೆರಳೆಣಿಕೆಯಷ್ಟಾದರೂ ಮನಸ್ಸಿನಲ್ಲಿ ಕೂತ ವ್ಯಕ್ತಿತ್ವದ ಭಾವ ಮಾಸಿ ಹೋಗಲಾರದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ#DileepRaj” ಎಂದು ಪೋಸ್ಟ್ ಅನ್ನು ಹಂಚಿಕೊಂಡು ಸಂತಾಪ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ನಟ ದಿಲೀಪ್ ರಾಜ್ ಅವರು ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಈಗಾಗಲೇ ದಿಲೀಪ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.
ನಟ ದಿಲೀಪ್ ರಾಜ್ ಅವರು ಕನ್ನಡ ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದರು. ಸುಮಾರು 24 ಸಿನಿಮಾಗಳಲ್ಲಿ ನಟಿಸಿದ್ದ ದಿಲೀಪ್ ರಾಜ್ ಅವರು 2005ರಲ್ಲಿ ತೆರೆಕಂಡಿದ್ದ ಬಾಯ್ ಫ್ರೆಂಡ್ ಚಿತ್ರದಲ್ಲಿ ನಾಯಕ ನಟನಾಗಿ ಹೊರಹೊಮ್ಮಿದ್ದರು. 2007ರಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಮಿಲನ ಸಿನಿಮಾದಲ್ಲಿನ ನಟನೆ ದಿಲೀಪ್ ರಾಜ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.




