ಮಣಿಪಾಲ: ಉಡುಪಿ ಜಿಲ್ಲೆಗೆ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ಜೂ. 15ರ ಬಳಿಕ ಪೈಪ್‌ಪೈನ್ ಮೂಲಕ ಗ್ಯಾಸ್ ಪೂರೈಕೆ ಮಾಡಬೇಕು ಎಂದು ಸಂಬಂಧಪಟ್ಟ ಸಂಸ್ಥೆಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಹಾಗೂ ಸಿಎನ್‌ಜಿ ಪೂರೈಕೆ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ 10 ವರ್ಷದ ಹಿಂದೆಯೇ ಯೋಜನೆ ಆರಂಭವಾಗಿದ್ದರೂ ಇನ್ನೂ ಪೂರ್ಣ ಗೊಂಡಿಲ್ಲ. ಅತಿ ಶೀಘ್ರ ಪೂರ್ಣ ಗೊಳಿಸಬೇಕು ಮತ್ತು ಯಾವ ಪ್ರದೇಶದಲ್ಲಿ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ ಹಾಗೂ ಸಾರ್ವಜನಿಕರು ಅದನ್ನು ಪಡೆಯುವುದು ಹೇಗೆ ಎಂಬುದನ್ನು ಪ್ರಚುರಪಡಿಸಬೇಕು ಎಂದು ನಿರ್ದೇಶಿಸಿದರು.
ಆರಂಭದಲ್ಲಿ ಉಡುಪಿ ನಗರ ವ್ಯಾಪ್ತಿಯ ಪೆರಂಪಳ್ಳಿ ಪ್ರದೇಶದ 1,500 ಮನೆಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆ ಮಾಡಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.
ಪೂರೈಕೆ ಹೆಚ್ಚಿಸಿ:
ಜಿಲ್ಲಾದ್ಯಂತ ಈಗ ಸಿಎನ್‌ಜಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಜಿಲ್ಲೆಗೆ ಪೂರೈಕೆಯಾಗುವ ಸಿಎನ್‌ಜಿ ಪ್ರಮಾಣ ಹೆಚ್ಚಿಸಬೇಕು. ಕನಿಷ್ಠ 10ರಿಂದ 11 ಲೋಡ್ ಏರಿಕೆಗೆ ಕ್ರಮ ವಹಿಸಬೇಕು. ಸಣ್ಣ ವಾಹನದ ಬದಲಿಗೆ ಜಂಬೋ ವಾಹನದ ಮೂಲಕ ಪೂರೈಕೆ ಮಾಡಬೇಕು. ಈ ಬಗ್ಗೆ 15 ಒಳಗೆ ವರದಿ ಸಲ್ಲಿಸಬೇಕು. ಜಿಲ್ಲೆಯ 3 ಹೊಸ ಸಿಎನ್‌ಜಿ ಸ್ಟೇಷನ್ ಕೂಡಲೇ ಆರಂಭಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ., ಗೇಲ್ ಇಂಡಿಯಾ ಹಾಗೂ ಅದಾನಿ ಸಮೂಹ ಸಂಸ್ಥೆಯ ಪ್ರತಿನಿಧಿ, ಎಜೆನ್ಸಿ ಪ್ರಮುಖರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




