ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಪಘಾತ; ಅಪಾರ ನಷ್ಟ

Share with

ಮಂಗಳೂರು: ಮಲ್ಪೆ ಮೀನುಗಾರಿಕ ಬಂದರಿನಿಂದ ಮೇ 24ರಂದು ರಾತ್ರಿ 10.30ರ ವೇಳೆಗೆ ಮೀನುಗಾರಿಕೆಗೆ ತೆರಳಿದ್ದ “ಭಾಗೀರಥಿ’ ಹೆಸರಿನ ಬೋಟ್ ಮಂಗಳೂರಿನಿಂದ 5 ನಾಟಿಕಲ್ ಮೈಲು ದೂರದಲ್ಲಿ ಅವಘಡಕ್ಕೀಡಾಗಿದ್ದು, ಅಪಾರ ನಷ್ಟ ಉಂಟಾಗಿದೆ.

ಬ್ರಹ್ಮಾವರ ಮಾಬುಕಳ ಜಯ ಸಾಲ್ಯಾನ್ ಮಾಲಕತ್ವದ ಈ ಬೋಟ್ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಮೇ 26ರಂದು ಬೆಳಗ್ಗಿನ ವೇಳೆ ಮಂಗಳೂರಿನಿಂದ ಸುಮಾರು 8-10 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಬೋಟಿನ ಗೇರ್‌ಬಾಕ್ಸ್‌ನಲ್ಲಿ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ದುರಸ್ತಿಗಾಗಿ ಬೆಳಗ್ಗೆ 9.30ಕ್ಕೆ ಮಂಗಳೂರು ಹಳೆ ಬಂದರಿಗೆ ಬಂದಿತ್ತು. ದುರಸ್ತಿ ಬಳಿಕ ರಾತ್ರಿ 9.30ರ ಹೊತ್ತಿಗೆ ಅಳಿವೆ ಬಾಗಿಲಿನ ಮೂಲಕ ನಿರ್ಗಮಿಸಿ, ಸುಮಾರು 5 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ, ಸಮುದ್ರದ ಅಡಿಯಲ್ಲಿ ಯಾವುದೋ ಮುಳುಗಡೆಯಾಗಿದ್ದ ಬೋಟಿನ ಭಾಗ ತಾಗಿ ಹಾನಿ ಉಂಟಾಯಿತು. ಮರದ ಬೋಟ್ ಆಗಿರುವ ಕಾರಣ ಒಳಗೆ ನೀರು ಬರಲಾರಂಭಿಸಿತು.

ರಾತ್ರಿ ಸುಮಾರು 12.30ರ ವೇಳೆಗೆ ಬೋಟ್ ಮುಳುಗಡೆ ಹಂತಕ್ಕೆ ತಲುಪಿದಾಗ ಹತ್ತಿರದಲ್ಲಿದ್ದ ನಾಲ್ಕು ಬೋಟಿನವರು ಧಾವಿಸಿ ಬಂದು ಮೀನುಗಾರರನ್ನು ರಕ್ಷಿಸಿದ್ದಾರೆ. ಬೋಟನ್ನು ಹಗ್ಗ ಕಟ್ಟಿನ ಇತರ ಎರಡು ಬೋಟುಗಳ ಸಹಾಯದಿಂದ ಎಳೆದು ತಂದು ಹಳೆ ಬಂದರು ದಕ್ಕೆಯ ಹೊಯ್ದೆ ಬಜಾರ್‌ನಲ್ಲಿ ನಿಲ್ಲಿಸಲಾಗಿದೆ.

ಸೊತ್ತುಗಳಿಗೆ ಹಾನಿ

ಎರಡು ದಿನಗಳ ಕಾಲ ಮೀನುಗಾರಿಕೆ ಮಾಡಿ ಸಂಗ್ರಹಿಸಿಡಲಾಗಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಮೀನು, ಸುಮಾರು 2,500 ಲೀ. ಡೀಸೆಲ್, ನೇವಿಗೇಷನ್ ಉಪಕರಣಗಳಾದ ಜಿಪಿಎಸ್, ಎಐಎಸ್, ವಯರ್‌ಲೆಸ್ ಸೆಟ್, ಫಿಶ್ ಫೈಂಡರ್, ಮೀನುಗಾರಿಕೆಯ ಬಲೆಗಳು ನಾಶವಾಗಿವೆ. ಬೋಟ್ ನ ಎಂಜಿನ್ ಒಳಗೆ ನೀರು ಹೋಗಿದ್ದು, ಅದು ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿದೆ. ಸುಮಾರು 25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಬೋಟ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *