ಸಿಎಂ ಸ್ಥಾನಕ್ಕೆ ರಾಜೀನಾಮೆ..; ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋಗಿಲ್ಲ… ವಿದಾಯ ಭಾಷಣ ಮಾಡಿದ ಸಿದ್ಧರಾಮಯ್ಯ

Share with

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಗುರುವಾರ (ಮೇ 28) ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲರ ಕಾರ್ಯದರ್ಶಿಯಾದ ಪ್ರಭುಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಜತೆಗಿದ್ದರು.

ಲೋಕಸಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಪಾಲರು ತುರ್ತು ಕಾರ್ಯದ ನಿಮಿತ್ತ ಇಂದೋರ್ ಗೆ ತೆರಳಿದ್ದು, ಸಂಜೆ ವಾಪಸ್ಸಾದ ನಂತರ ಅಂಗೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಒದಗಿಸಿಕೊಟ್ಟಂತಹ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ, ಮಲ್ಲಿಕಾರ್ಜುನ ಖರ್ಗೆಯವರಿಗೆ ಅಪಾರವಾದ ಧನ್ಯವಾದ ಅರ್ಪಿಸುತ್ತೇನೆ.

“ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರು ಅಭಿಮಾನಿಗಳೇ ನನ್ನ ದೇವರು ಎಂದಿದ್ದರು. ಹಾಗಾಗಿ ನಾನು ರಾಜಕಾರಣಿ…ನನಗೆ ಮತದಾರರೇ ಅಭಿಮಾನಿ ದೇವರು ಎಂದರು.

2006ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದೆ. ಅಲ್ಲಿಂದ ಈವರೆಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಶಾಸಕರು, ಲೋಕಸಭಾ, ರಾಜ್ಯಸಭಾ ಸದಸ್ಯರು, ಸಹೋದ್ಯೋಗಿಗಳು ನನ್ನ ಮೇಲೆ ಪ್ರೀತಿ ತೋರಿಸಿ, ಅವಕಾಶ ಕಲ್ಪಿಸಿಕೊಟ್ಟಿದ್ದು, ಅವರನ್ನೂ ಕೂಡಾ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ರಾಜ್ಯಸಭೆಗೆ ಹೋಗಲ್ಲ:

ಸರ್ ನಿಮ್ಮ ಮುಂದಿನ ಹೆಜ್ಜೆ ಏನು ಎಂಬ ಪ್ರಶ್ನೆಗೆ…ಪಕ್ಷದ ಹೈಕಮಾಂಡ್ ನನಗೆ ರಾಜ್ಯಸಭೆಗೆ ಆಯ್ಕೆಯಾಗುವಂತೆ ಹೇಳಿದೆ. ಆದರೆ ನಾನು ವಿನಮ್ರವಾಗಿ ರಾಜ್ಯಸಭೆ ಆಫ‌ರ್ ತಿರಸ್ಕರಿಸಿದ್ದು, ರಾಜ್ಯರಾಜಕಾರಣದಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದೇನೆ. ನಾನು ಶಾಸಕನಾಗಿ ಇನ್ನೂ ಎರಡು ವರ್ಷ ಪೂರೈಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಸಿಎಂ ಯಾರು:

ಶಾಸಕಾಂಗ ಪಕ್ಷದ ನಾಯಕನಾಗುವವರು ಮುಂದಿನ ಸಿಎಂ ಆಗುತ್ತಾರೆ ಎಂದು ಒಂದು ಸಾಲಿನ ಉತ್ತರ ಕೊಡುವ ಮೂಲಕ ಪತ್ರಿಕಾಗೋಷ್ಠಿಯನ್ನು ಕೊನೆಗೊಳಿಸಿ, ಧನ್ಯವಾದ ಅರ್ಪಿಸಿ ತೆರಳಿದರು.

ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋಗಿಲ್ಲ:

ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋಗಿಲ್ಲ. ಆಸ್ತಿ-ಪಾಸ್ತಿ ಮಾಡಿಕೊಳ್ಳಬೇಕೆಂದು ಬಯಸಿದವನಲ್ಲ. ಮತದಾರ ದೇವರು ನನಗೆ ಯಾವಾಗ ಅವಕಾಶ ಕೊಟ್ಟಿದ್ದಾರೋ ಅಲ್ಲಿಂದ ನಾನು ರಾಜಕೀಯ ಜೀವನದಲ್ಲಿ ಇದ್ದೇನೆ. 50 ವರ್ಷಗಳ ರಾಜಕಾರಣ ಜೀವನ ಅನುಭವಿಸಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ನಂಬಿಕೊಂಡಿರುವ ಮೌಲ್ಯಗಳ ಜತೆ ರಾಜೀ ಮಾಡಿಕೊಂಡಿಲ್ಲ. ಸಿದ್ದಾಂತದ ಜತೆ ರಾಜೀಯಾಗಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಪ್ರಾಥಮಿಕ ಆದ್ಯತೆಗಳಾದ ಶಿಕ್ಷಣ, ಆರೋಗ್ಯ, ಅನ್ನ, ವಸತಿ ಸಿಗಬೇಕು ಎಂಬುದು ನನ್ನ ಆಶಯವಾಗಿತ್ತು.

ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ. ನನ್ನ ಕುಟುಂಬದವರಾರು ರಾಜಕೀಯದಲ್ಲಿ ಇರಲಿಲ್ಲ. ನಮ್ಮದು ಬಡ ಕುಟುಂಬ. ನಾನು ಶಾಸಕನಾಗೇನೆ, ಮಂತ್ರಿಯಾಗ್ತನೆ, ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸು ಕಂಡಿರಲಿಲ್ಲ. ಆದರೆ ನಾನು ಹಳ್ಳಿಗಾಡಿನಿಂದ ರಾಜಕೀಯ ಜೀವನ ಆರಂಭಿಸಿ…ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆ. ರಾಜಕಾರಣಕ್ಕೆ ಬಂದಾಗಿನಿಂದಲೂ ಬುದ್ಧ, ಬಸವ, ಗಾಂಧಿ, ಅಂಬೇಡ್ಕ‌ರ್ ಅವರ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟವನು. ಸಂವಿಧಾನದ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ.

ಈ ಅಸಮಾನತೆ ತೊಲಗಬೇಕಾದರೆ ಎಲ್ಲರಿಗೂ ಸಮಾನತೆಯ ಅವಕಾಶ ಸಿಗಲೇಬೇಕು ಎಂಬ ನಿಟ್ಟಿನಲ್ಲಿ ಈವರೆಗೆ ಕಾರ್ಯನಿರ್ವಹಿಸಿದ್ದೇನೆ. ನಮ್ಮ ಚುನಾವಣ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದೇವೆಯೋ ಅದನ್ನು ಪ್ರಾಮಾಣಿಕವಾಗಿ ಜಾರಿ ಮಾಡಿದ್ದೇವೆ.

2018ರಲ್ಲಿ ನಾವು 165 ಭರವಸೆಗಳನ್ನು ನೀಡಿದ್ದು, ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ. 2023ರಲ್ಲಿ 550ಕ್ಕೂ ಹೆಚ್ಚು ಭರವಸೆ ನೀಡಿದ್ದೆ, ಅದರಲ್ಲಿ ಈವರೆಗೆ 300ಕ್ಕೂ ಅಧಿಕ ಭರವಸೆ ಈಡೇರಿಸಿದ್ದೇನೆ. ಅಲ್ಲದೇ ಘೋಷಣೆ ಮಾಡಿದಂತೆ 5 ಪ್ರಮುಖ ಗ್ಯಾರಂಟಿಗಳನ್ನು ಮೊದಲ ವರ್ಷವೇ ಜಾರಿ ಮಾಡಿದ್ದೇನೆ.

ರಾಜ್ಯ ಸಾಲದಲ್ಲಿದೆ ಎಂಬ ಆರೋಪ ಸುಳ್ಳು:

ಮುಖ್ಯಮಂತ್ರಿಯಾಗಿ ಸಾಲ ಮಾಡಿದ್ದಾರೆಂಬುದು ಆರೋಪ ಸುಳ್ಳು. ಆದರೆ ನಾನು ಹಣಕಾಸು ನಿಯಮದ ಅನುಸಾರವೇ ಸಾಲ ಮಾಡಿದ್ದೇನೆ. ತಲಾದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿರುವಂತೆ ಕೆಲಸ ಮಾಡಿದ್ದೇನೆ. ವಿತ್ತೀಯ ಕೊರತೆ ಶೇ.3ರೊಳಗೆ ಇರುವಂತೆ ನೋಡಿಕೊಂಡಿದ್ದೇನೆ. ರಾಜ್ಯದ ವಿತ್ತೀಯ ಕೊರತೆ ಶೇ.2.95ರಷ್ಟಿದೆ. ಕರ್ನಾಟಕದ ಜಿಎಸ್‌ ಡಿಪಿ 30 ಲಕ್ಷ ಕೋಟಿಗೂ ಹೆಚ್ಚಿದೆ. ಹಾಗಾಗಿ ಕರ್ನಾಟಕದ ಸಾಲ ಪ್ರಮಾಣ ಜಿಎಸ್ ಡಿಪಿಯ ಶೇ.25ರೊಳಗೆ ಇದೆ. ಈ ವರ್ಷ ರಾಜ್ಯಕ್ಕೆ ಸುಮಾರು 19 ಸಾವಿರ ಕೋಟಿ ರೂಪಾಯಿ ಆದಾಯ ಕೊರತೆ ಇದೆ. ರಾಜ್ಯದ ಹಣಕಾಸು ಯೋಜನೆಗಳಿಗೆ ಕೇಂದ್ರ ಸರ್ಕಾರ ಸಮರ್ಪಕವಾಗಿ ಅನುದಾನ ಒದಗಿಸುತ್ತಿಲ್ಲ. ಜಿಎಸ್ ಟಿ ನಷ್ಟ ತುಂಬಿ ಕೊಡುವುದಾಗಿ ಹೇಳಿದ್ದರು. ಅದರೆ ಕೇಂದ್ರ ಸರ್ಕಾರ ಅದನ್ನು ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.


Share with

Leave a Reply

Your email address will not be published. Required fields are marked *