ಬಿಜೆಪಿಗೆ ಅಣ್ಣಾಮಲೈ ಗುಡ್ ಬೈ..!? ರಾಜ್ಯ ಸಭಾ ಆಫರ್ ತಿರಸ್ಕರಿಸಿದ ಸಿಂಗಂ

Share with

ನವದೆಹಲಿ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರನಡೆಯುವುದು ಬಹುತೇಕ ಖಚಿತವಾಗಿದೆ.

ಮಂಗಳವಾರ ಮುಂಜಾನೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿರುವ ಅಣ್ಣಾಮಲೈ, ತಮಗೆ ಪಕ್ಷದಿಂದ “ಗೌರವಯುತ ” (Cordial Separation) ಎನ್ನಲಾಗಿದೆ.

ರಾಜ್ಯಸಭಾ ಆಫ‌ರ್ ತಿರಸ್ಕರಿಸಿದ ಸಿಂಗಂ

ಮೂಲಗಳ ಪ್ರಕಾರ, ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಹೈಕಮಾಂಡ್ ತೀವ್ರ ಕಸರತ್ತು ನಡೆಸಿದೆ. ಇದರ ಭಾಗವಾಗಿ ಅವರಿಗೆ ಗೌರವಾನ್ವಿತ ‘ರಾಜ್ಯಸಭಾ ಸದಸ್ಯತ್ವ’ದ ಆಫರ್ ಕೂಡ ನೀಡಲಾಗಿತ್ತು. ಆದರೆ, ಅಣ್ಣಾಮಲೈ ಈ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ್ದು, ಬಿಜೆಪಿಯಲ್ಲಿ ತಮಗೆ ಭವಿಷ್ಯ ಕಾಣಿಸುತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ತಾವು ಈಗಾಗಲೇ ದೃಢ ನಿರ್ಧಾರಕ್ಕೆ ಬಂದಿರುವುದಾಗಿ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಪಕ್ಷ ಕಟ್ಟಲಿದ್ದಾರಾ ಮಾಜಿ ಐಪಿಎಸ್?

ಬಿಜೆಪಿಯಿಂದ ಹೊರಬಂದ ಬಳಿಕ ಅಣ್ಣಾಮಲೈ ಸ್ವಂತ ಹಾದಿ ಹಿಡಿಯಲಿದ್ದಾರೆ. ಆರಂಭದಲ್ಲಿ ಅವರು ಒಂದು ಸಾಮಾಜಿಕ ಚಳವಳಿಯನ್ನು ಮುನ್ನಡೆಸಿ, ತದನಂತರ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ.

ಸಮಾನ ಮನಸ್ಕರನ್ನು ಹಾಗೂ ವಿವಿಧ ವೃತ್ತಿಪರ ಹಿನ್ನೆಲೆಯುಳ್ಳ ಯುವಕರನ್ನು ಒಳಗೊಂಡ ಬೃಹತ್ ಸ್ವಯಂಸೇವಕರ ಜಾಲವನ್ನು ನಿರ್ಮಿಸುವುದು ಅವರ ಉದ್ದೇಶವಾಗಿದೆ.

ಅಣ್ಣಾಮಲೈ ಅವರು ಈಗಾಗಲೇ ನಡೆಸುತ್ತಿರುವ “ವಿ ದಿ ಲೀಡರ್ಸ್” (We The Leaders) ಎಂಬ ಲಾಭರಹಿತ ನಾಯಕತ್ವ ಸಂಸ್ಥೆಯೇ ಅವರ ಮುಂಬರುವ ಬೃಹತ್ ರಾಜಕೀಯ ಯೋಜನೆಗೆ ಪ್ರಮುಖ ಅಡಿಪಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಗಳಲ್ಲೇ ಅವರ ಹೊಸ ತಂಡ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮೈತ್ರಿಯೇ ಮುಳುವಾಯಿತೇ?

ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸೀಟುಗಳ ಪೈಕಿ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲಲಷ್ಟೇ ಶಕ್ತವಾಗಿತ್ತು. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಅಣ್ಣಾಡಿಎಂಕೆ ಎದುರು ಬಿಜೆಪಿಯನ್ನು ಸ್ವತಂತ್ರವಾಗಿ ಕಣಕ್ಕಿಳಿಸಿ ಶಕ್ತಿ ಪ್ರದರ್ಶಿಸಬೇಕು ಎಂಬುದು ಅಣ್ಣಾಮಲೈ ನಿಲುವಾಗಿತ್ತು. ಆದರೆ, ದಿಢೀರ್ ಆಗಿ ಬಿಜೆಪಿ ಹೈಕಮಾಂಡ್ ಮತ್ತೆ ಅಣ್ಣಾಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಂಡಿತು.

ಬದಿಗೆ ಸರಿದಿದ್ದ ‘ಸಿಂಗಂ’:

ಮೈತ್ರಿ ಮಾಡಿಕೊಳ್ಳುವ ಮುನ್ನ ಅಣ್ಣಾಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರು ತಮಿಳುನಾಡು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಶರತ್ತು ವಿಧಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ತದನಂತರ ನಡೆದ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧೆಯನ್ನೂ ಮಾಡದೆ, ಪ್ರಚಾರದಲ್ಲೂ ಸಕ್ರಿಯವಾಗಿ ಭಾಗವಹಿಸದೆ ಮೂಲೆಗುಂಪಾಗಿದ್ದರು. ಇದೀಗ ಅವರು ಅಧಿಕೃತವಾಗಿ ಕಮಲ ದಿಂದ ಹೊರಬರಲು ಸಜ್ಜಾಗಿದ್ದಾರೆ.


Share with

Leave a Reply

Your email address will not be published. Required fields are marked *