ನವದೆಹಲಿ: ಭಾರತದ ಹವಾಮಾನ ಇಲಾಖೆ (IMD)ಯ ಇತ್ತೀಚಿನ ಹವಾಮಾನ ಮಾದರಿ ಮುನ್ಸೂಚನೆಗಳ ಪ್ರಕಾರ, ಈ ಬಾರಿ ನೈಋತ್ಯ ಮಾರುತ ದಕ್ಷಿಣ ಭಾರತದಲ್ಲಿ ಜೂನ್ 5 ಅಥವಾ 6ರ ನಂತರ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಹವಾಮಾನ ತಜ್ಞರ ಪ್ರಕಾರ, ಈ ಮೇಲ್ಮಟ್ಟದ ಗಾಳಿ, ನೈಋತ್ಯ ಮಾನ್ಸೂನ್ ಮಾರುತ ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೈಋತ್ಯ ಮುಂಗಾರು ವಿಳಂಬದಿಂದ ದಕ್ಷಿಣ ಭಾರತದಲ್ಲಿ ಮಾನ್ಸೂನ್ ಮಳೆಯ ತೀವ್ರತೆ ಹಾಗೂ ವ್ಯಾಪ್ತಿಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಐಎಂಡಿಯ ಇತ್ತೀಚಿನ ಮಾದರಿಗಳು ಜೂನ್ ಮೊದಲ ವಾರದ ಅಂತ್ಯದ ವೇಳೆಗೆ ಮಾನ್ಸೂನ್ ಬಲಗೊಳ್ಳಲಿದ್ದು, ಅದರ ಬಳಿಕ ಮಾನ್ಸೂನ್ ಚಟುವಟಿಕೆ ಹೆಚ್ಚು ಸಕ್ರಿಯವಾಗುವ ನಿರೀಕ್ಷೆಯಿದೆ ಎಂದು ವಿವರಿಸಿದೆ. ಅಲ್ಲದೇ ನೈಋತ್ಯ ಮಾನ್ಸೂನ್ನಿಂದ ಈ ವರ್ಷ ದೇಶದಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಐಎಂಡಿ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಈ ವರ್ಷ ಮುಂಗಾರು ಮಳೆ ವಿಳಂಬವಾಗಿದ್ದು, ಐಎಂಡಿಯ ಮುನ್ಸೂಚನೆ ಹಲವು ಬಾರಿ ತಪ್ಪಾಗಿದೆ. ಐಎಂಡಿ ಆರಂಭದಲ್ಲಿ ಮೇ 26 ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಆಗಮನದ ಮುನ್ಸೂಚನೆ ನೀಡಿತ್ತು. ಆ ನಂತರ ಜೂನ್ 2ರಂದು ಮುಂಗಾರು ಆರಂಭವಾಗುವ ಸಾಧ್ಯತೆ ಇರುವುದಾಗಿ ಐಎಂಡಿ ತಿಳಿಸಿತ್ತು.
ಜೂನ್ ತಿಂಗಳಿನಲ್ಲೂ ಬಿಸಿಲಿನ ತೀವ್ರತೆ ಹೆಚ್ಚಾಗಿರುತ್ತದೆ ಎಂದು ಐಎಂಡಿ ಅಂದಾಜು ಮಾಡಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಬಿಹಾರ, ಒಡಿಶಾ, ಛತ್ತೀಸ್ಗಢ, ಗುಜರಾತ್, ಆಂಧ್ರ ಪ್ರದೇಶ ಜೊತೆಗೆ ಮಹಾರಾಷ್ಟ್ರ, ತೆಲಂಗಾಣ, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಸಿಗಾಳಿ ಇರಲಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.
IMD ಪ್ರಕಾರ, ಮುಂಗಾರು ಅವಧಿಯಲ್ಲಿ ಎಲ್ ನಿನೋ (El Nino) ಪರಿಣಾಮ ಮಾನ್ಸೂನ್ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗೆ ತೊಂದರೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ.
ಪೂರ್ವ ಮಾನ್ಸೂನ್ ಮಳೆಯು ಕೇರಳದ ಕೆಲವು ಭಾಗಗಳಲ್ಲಿ ಈಗಾಗಲೇ ಸ್ವಲ್ಪ ಮಳೆಯನ್ನು ತಂದಿದೆ, ಆದರೆ ಮಾನ್ಸೂನ್ ಆಗಮನದ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ ಎಂದು ವರದಿ ಹೇಳಿದೆ.




