ಕಾಸರಗೋಡು: ವಾಟ್ಸಾಪ್‌ನಲ್ಲಿ ಭಾವನಾತ್ಮಕ ಸ್ಟೇಟಸ್‌ವೊಂದನ್ನು ಹಾಕಿದ ಬಳಿಕ ವಿಷ ಸೇವಿಸಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮೃತರನ್ನು ಕಾಸರಗೋಡು ಕಲೆಕ್ಟರೇಟ್‌ನ ಎಂಡೋಸಲ್ಫಾನ್ ಸೆಲ್‌ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಆಶಾಲತಾ ಅತಿರುಕುಳಿ (41) ಎಂದು ಗುರುತಿಸಲಾಗಿದೆ.
ಜಿಮ್‌ಗೆ ತೆರಳಿದ್ದ ಆಶಾಲತಾ ಬಳಿಕ ಕಾರಿನಲ್ಲಿ ಚೆಂಗಲದ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆಗೆ ತೆರಳಿದ್ದರು. ವಿಷ ಸೇವಿಸಿರುವುದಾಗಿ ವೈದ್ಯರಿಗೆ ತಿಳಿಸಿದ ಹಿನ್ನೆಲೆಯಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಷ ಸೇವಿಸುವ ಮುನ್ನ ಅವರು ವಾಟ್ಸಾಪ್‌ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಸ್ಟೇಟಸ್ ಆಗಿ ಹಾಕಿದ್ದರು ಎನ್ನಲಾಗಿದೆ. ಈ ಸ್ಟೇಟಸ್ ಯಾರನ್ನು ಉದ್ದೇಶಿಸಿತ್ತು ಹಾಗೂ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಎಂಎ ಹಾಗೂ ಬಿಎಡ್ ಪದವೀಧರೆಯಾಗಿದ್ದ ಆಶಾಲತಾ, ಕಲೆಕ್ಟರೇಟ್ ರೀಡಿಂಗ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಕಥೆ ಹೇಳುವಿಕೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.




