ಭೋಪಾಲ್: ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಮಧ್ಯಪ್ರದೇಶದ ಪ್ರಸಿದ್ದ ಇನ್ಫ್ಲುಯೆನ್ಸರ್ ಹಾಗೂ ಮಾಡೆಲ್ ನಿಧಿ ತಿವಾರಿ (30) ಆತ್ಮಹತ್ಯೆಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿಧಿ ತಿವಾರಿ ಅವರು ಫೇಸ್ಬುಕ್ನಲ್ಲಿ ಸುಮಾರು 9 ಲಕ್ಷ ಹಾಗೂ ಇನ್ಸ್ಟಾಗ್ರಾಮ್ನಲ್ಲಿ 7 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದುವ ಮೂಲಕ ಮಧ್ಯಪ್ರದೇಶದ ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ತಾರೆ ಎನಿಸಿಕೊಂಡಿದ್ದರು. 2024ರಲ್ಲಿ ‘ಮಿಸ್ ಪ್ರೆಟಿ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದ ಅವರು, ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಕ್ರಿಯವಾಗಿ ಶ್ರಮಿಸುತ್ತಿದ್ದರು.
ಶನಿವಾರ ಸಂಜೆ ಸಿಂಗೌಲಿ ಜಿಲ್ಲೆಯ ಮೊರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಭೂಸಾ ಮೋಡ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧಿ ತಿವಾರಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆಯ ಸಮಯದಲ್ಲಿ ನಿಧಿ ಅವರು ಯಾರೊಂದಿಗೋ ದೂರವಾಣಿಯಲ್ಲಿ ಮಾತನಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮರಣದ ಮುನ್ನ ನಡೆದ ಸಂಭಾಷಣೆ ಹಾಗೂ ಇತರ ಸನ್ನಿವೇಶಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಕರೆ ದಾಖಲೆಗಳು ಹಾಗೂ ಡಿಜಿಟಲ್ ಚಟುವಟಿಕೆಗಳನ್ನು ಆಧಾರವಾಗಿಟ್ಟುಕೊಂಡು ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವ ಮೊದಲು ಆತ್ಮಹತ್ಯೆಗೆ ನಿರ್ದಿಷ್ಟ ಕಾರಣವನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊರ್ವಾ ಪೊಲೀಸ್ ಠಾಣೆಯ ಉಸ್ತುವಾರಿ ಡಾ. ಜ್ಞಾನೇಂದ್ರ ಸಿಂಗ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರಿಂದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಡಲಿಂಗ್, ಈವೆಂಟ್ಗಳು ಹಾಗೂ ಡಿಜಿಟಲ್ ಕಂಟೆಂಟ್ ಮೂಲಕ ಕೋಟ್ಯಂತರ ವೀಕ್ಷಕರನ್ನು ತಲುಪುತ್ತಿದ್ದ ಯುವ ಇನ್ಫ್ಲುಯೆನ್ಸರ್ ಹಠಾತ್ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ.




