ಪುತ್ತೂರು: ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರಿಗೆ ಏಕಾಏಕಿ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಈ ವೇಳೆ ಈಶ್ವರಮಂಗಲದ ಹಿರಿಯ ವೈದ್ಯ ಡಾ. ಶ್ರೀಕುಮಾರ್ ಕತ್ರಿಬೈಲ್ ತಕ್ಷಣ ನೆರವಿಗೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿ ಪ್ರಯಾಣಿಕನ ಜೀವ ಉಳಿಸಲು ನೆರವಾಗಿದ್ದಾರೆ.
ಸೆ.29ರಂದು ಬೆಳಗ್ಗೆ ಸುಮಾರು 9.30ರ ವೇಳೆಗೆ ಘಟನೆ ನಡೆದಿದೆ. ಪ್ರಯಾಣಿಕ ಎದೆ ಹಿಡಿದು ಚಡಪಡಿಸುತ್ತಿದ್ದ ವೇಳೆ ವಿಮಾನ ಸಿಬ್ಬಂದಿ ವೈದ್ಯರ ಸಹಾಯ ಕೋರಿದ್ದಾರೆ. ಸುಮಾರು 40 ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ. ಶ್ರೀಕುಮಾರ್ ತಕ್ಷಣ ಪ್ರಯಾಣಿಕನ ಆರೋಗ್ಯ ಪರಿಶೀಲಿಸಿ, ಹೃದಯದ ಕಾರ್ಯ ಹಾಗೂ ರಕ್ತದೊತ್ತಡ ಗಮನಿಸಿ ಅಗತ್ಯ ಔಷಧ ನೀಡಿ ವೈದ್ಯಕೀಯ ನೆರವು ನೀಡಿದ್ದಾರೆ. ಕೆಲವೇ ಸಮಯದಲ್ಲಿ ಪ್ರಯಾಣಿಕ ಚೇತರಿಸಿಕೊಳ್ಳಲು ಆರಂಭಿಸಿದ್ದಾರೆ.
ಮುಂಬೈ ತಲುಪುವಷ್ಟರಲ್ಲಿ ಪ್ರಯಾಣಿಕನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿ ವೀಲ್‌ಚೇರ್ ಮತ್ತು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಡಾ. ಶ್ರೀಕುಮಾರ್ ಅವರ ಮಾನವೀಯ ಕಾರ್ಯಕ್ಕೆ ವಿಮಾನದಲ್ಲಿದ್ದ ಸುಮಾರು 250 ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
ಬಿಎಂಎಸ್, ಎಂಡಿ ಪದವೀಧರರಾದ ಡಾ. ಶ್ರೀಕುಮಾರ್ ಕತ್ರಿಬೈಲ್ ಅವರು ಕಳೆದ 41 ವರ್ಷಗಳಿಂದ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಗ್ರಾಮೀಣ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.




