ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸೋರಿಕೆ: ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿಗೆ ಗಾಯ

Share with

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಸೋರಿಕೆಯಿಂದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿರುವ ಘಟನೆ ಶನಿವಾರ ಬೆಳಗ್ಗೆ(ಅ.3) ನಗರದ ನಾಯಂಡಹಳ್ಳಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಕರಿಲಿಂಗಪ್ಪ (40), ಅವರ ಪತ್ನಿ ಲಕ್ಷ್ಮಮ್ಮ (42), ಚೈತ್ರಾ (11), ಬಸವ (9) ಹಾಗೂ ಮೂರು ವರ್ಷದ ಅವಳಿ ಮಕ್ಕಳಾದ ಗೀತಾ ಮತ್ತು ಗಿರಿಜಾ ಎಂದು ಗುರುತಿಸಲಾಗಿದೆ.

ರಾಯಚೂರು ಮೂಲದ ಈ ಕುಟುಂಬ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಶನಿವಾರ ಬೆಳಗ್ಗೆ ಮನೆಯಲ್ಲಿದ್ದ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ ಕುಟುಂಬದ ಆರು ಸದಸ್ಯರನ್ನೂ ತತ್ ಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ಚಿಕಿತ್ಸಾ ವಿಭಾಗಕ್ಕೆ (ಬರ್ನ್ಸ್ ವಾರ್ಡ್) ಸ್ಥಳಾಂತರಿಸಲಾಗಿದ್ದು, ತಾಯಿ ಲಕ್ಷ್ಮಮ್ಮ ಮತ್ತು ಅಪ್ರಾಪ್ತ ಮಕ್ಕಳ ಪೈಕಿ ಒಂದು ಗಂಭೀರ ಸ್ಥಿತಿಯಲ್ಲಿದ್ದು ಹಾಗೂ ಉಳಿದವರ ಮೇಲೆ ನಿಕಟ ನಿಗಾ ವಹಿಸಲಾಗಿದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *